ರಾಜ್ಯ

ನಿಗೂಢ ಸಾವು: ವಿಧಾನಸೌಧಕ್ಕೆ ಆಗಮಿಸಲಿರುವ ಡಿ.ಕೆ ರವಿ ಕುಟುಂಬಸ್ಥರು

Manjula VN

ಬೆಂಗಳೂರು: ದಕ್ಷ ಅಧಿಕಾರಿಯೆಂದೇ ಖ್ಯಾತಿ ಪಡೆದಿದ್ದ ಡಿ.ಕೆ.ರವಿ ಅವರು ಸಾವನ್ನಪ್ಪಿ ಇಂದಿಗೆ ಒಂದು ವರ್ಷ ಕಳೆದರೂ ಸಹ ಈವರೆಗೂ ಯಾವುದೇ ರೀತಿಯ ಬೆಳವಣಿಗೆಗಳು ಕಂಡು ಬರದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ರವಿ ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.

ತುಮಕೂರಿನ ದೊಡ್ಡಕೊಪ್ಪಲಿನಲ್ಲಿರುವ ಡಿ.ಕೆ.ರವಿ ಸಮಾಧಿಗೆ ನಮನ ಸಲ್ಲಿಸಿದ ಬಳಿಕೆ ಪಾದಯಾತ್ರೆ ಆರಂಭಿಸಲು ತೀರ್ಮಾನಿಸಿರುವ ಕುಟುಂಬಸ್ಧರು, ಹುಲಿಯೂರು ದುರ್ಗದಿಂದ ವಾಹನಗಳಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸೂಕ್ತ ಪರಿಹಾರ ನೀಡದದಿದ್ದಕ್ಕೆ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ವರೆಗೂ ಭೇಟಿ ನೀಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರವಿ ಕುಟುಂಬಸ್ಥರು, ಇದೀಗ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ಹೊಸದಾಗಿ ತನಿಖೆ ಆರಂಭಿಸುವಂತೆ ವಿಧಾನ ಸೌಧಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಲು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ. 

ಈ ಕುರಿತಂತೆ ಮಾತನಾಡಿರುವ ರವಿ ತಾಯಿ ಗೌರಮ್ಮ ಅವರು, ಸರ್ಕಾರ ತನ್ನ ಪ್ರಾಥಮಿಕ ವರದಿಯಲ್ಲಿ ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಿತ್ತು. ಆದರೆ, ಮತ್ತೆ ಈ ಬಗ್ಗೆ ಯಾವುದೇ ರೀತಿಯ ತನಿಖೆಯಾಗಲಿಲ್ಲ. ಪ್ರಕರಣ ಸಂಬಂಧ ಮತ್ತೆ ಹೊಸದಾಗಿ ತನಿಖೆಯನ್ನು ಆರಂಭಿಸಬೇಕು. ನನ್ನ ಮಗ ಹೇಗೆ ಸತ್ತ ಎಂಬುದು ತಿಳಿಯಬೇಕು. ಮಗ ಸತ್ತು 1 ವರ್ಷ ಕಳೆದಿದೆ. ನಮಗೆ ನ್ಯಾಯಬೇಕು ಎಂದು ಹೇಳಿಕೊಂಡಿದ್ದಾರೆ.

2015 ಮಾ.16 ರಂದು ಡಿ.,ಕೆ ರವಿ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಬೆಂಗಳೂರಿನ ಫ್ಲ್ಯಾಟ್ ವೊಂದರಲ್ಲಿ ರವಿ ಅವರ ಮೃತ ದೇಹ ಸಿಕ್ಕಿತ್ತು.

SCROLL FOR NEXT