ಉಡುಪಿ: ಸಿಮೊಗೇರಿ ಸಮಷ್ಟಿ ವೇದಿಕೆಯಿಂದ ಏ.4 ರಿಂದ 6 ವರೆಗೆ ಕವಿ ಗೊಪಾಲಕೃಷ್ಣ ಅಡಿಗರ ಪ್ರಸಿದ್ಧ ಭಾವಗೀತೆಗಳ ಹಾಡುವ ತರಬೇತಿಯನ್ನು ಕುಂದಾಪುರದ ಮೊಗೇರಿಯಲ್ಲಿ ಆಯೋಜಿಸಲಾಗಿದೆ.
ಭಾವಗೀತೆಗಳ ಹಾಡುವ ತರಬೇತಿಯೊಂದಿಗೆ ಹಿರಿಯ ರಂಗ ಕಲಾವಿದ, ಗಾಯಕ, ರಾಗ ಸಂಯೋಜಕ, ಗರ್ತಿಗೆರೆ ರಾಘಣ್ಣರ ಸಹಸ್ರ ಚಂದ್ರ ದರ್ಶನದ ಅಭಿನಂದನೆ ಕಾರ್ಯಕ್ರಮವೂ ನಡೆಯಲಿದೆ. ಮೊಗೇರಿಯಲ್ಲಿರುವ ಶಂಕರ ನಾರಾಯಣ ದೇವಸ್ಥಾನ ಆವರಣದಲ್ಲಿ ಏ.4 ರ ಸಂಜೆ 4 ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಏ.5 ರಿಂದ ತರಬೇತಿ ಕಾರ್ಯಕ್ರಮಗಳು ಬೆಳಿಗ್ಗೆ 9 :30 ರಿಂದ 4 ಗಂಟೆ ವರೆಗೆ ಮೊಗೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿವೆ.
ಸಮಾರೋಪ ಸಮಾರಂಭ ಏ.6 ರಂದು ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತ ಪಂಚಾಯತ್ ರಾಜ್ ತಜ್ಞರಾದ ಎಸ್. ಜನಾರ್ದನ ಮರವಂತೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಆದಾಯ ತೆರಿಗೆ ನಿವೃತ್ತ ಉಪ ಆಯುಕ್ತ ಚಂದ್ರ ಶೇಖರ ಚಡಗ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಭಾಗವಹಿಸಲಿದ್ದಾರೆ.
ಸಮಾರೋಪ ಕಾರ್ಯಕ್ರಮದಲ್ಲಿ ಬಹುಮುಖಿ ಸಾಧನೆಯ ಸಾರ್ಥಕ ಕಲಾಜೀವಿ ಗರ್ತಿಗೆರೆ ರಾಘಣ್ಣ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಆರ್.ಕೆ.ಸಂಜೀವ ರಾವ್ ಶೈಕ್ಷಣಿಕ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಕೆ.ಎಸ್.ಪ್ರಕಾಶ ರಾವ್ ಗರ್ತಿಗೆರೆ ರಾಘಣ್ಣ ಅವರ ಕಲಾರಾಧನೆ ಕುರಿತು ಮಾತನಾಡಲಿದ್ದಾರೆ.