ಬೆಂಗಳೂರು: ಚಾಲನಾ ಪರವಾನಗಿಗಾಗಿ ಸಾರಿಗೆ ಕಚೇರಿಯ ಸುತ್ತ ಹಲವು ಬಾರಿ ಅಲೆಯುವ ಕಷ್ಟ ಇನ್ನು ಒಂದೇ ತಿಂಗಳಲ್ಲಿ ಕೊನೆಯಾಗಲಿದ್ದು, ಸಾರಿಗೆಯ ಹೊಸ ಯೋಜನೆಯೊಂದು ಚಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸಡಿಲಗೊಳಿಸಲಿದೆ.
ಇದಕ್ಕಾಗಿ ಸಾರಿಗೆ ಇಲಾಖೆ ಹೊಸ ಸಾಫ್ಟ್ ವೇರ್ ನ ಮೊರೆಹೋಗಿದ್ದು, ತಂತ್ರಾಂಶ ಸಿದ್ಧವಾದ ಬಳಿಕ ಎಲ್ ಎಲ್ (ಲರ್ನಿಂಗ್ ಲೈಸೆನ್ಸ್)ಗೆ ನಾವು ಮನೆಯಿಂದಲೇ ಪರೀಕ್ಷೆ ಬರಯಲು ಅನುವು ಮಾಡಿಕೊಡುವಂತೆ ಸಾರಿಗೆ ಹೊಸ ಯೋಜನೆ ರೂಪಿಸುತ್ತಿದೆ. ಇನ್ನು ಈ ಪ್ರಕ್ರಿಯೆಗಾಗಿ ಸಾರಿಗೆ ಇಲಾಖೆಯ ಹೊಸ ಸಾರಥಿ-4 ಎಂಬ ತಂತ್ರಾಂಶ ಸಿದ್ಧಗೊಳ್ಳುತ್ತಿದ್ದು, ಚಾಲನ ಪರವಾನಗಿ ಬಯಸಿ ಅರ್ಜಿ ಹಾಕುವವರು ತಂತ್ರಾಂಶದ ಸಹಾಯದಿಂದ ಎಲ್ ಎಲ್ ಪಡೆಯಬಹುದಾಗಿದೆ.
ತಂತ್ರಾಂಶದ ಮೂಲಕ ನಾವು ನಮ್ಮ ಜನ್ಮ ದಿನಾಂಕ ಸಾಬೀತು ಪಡಿಸುವ ಅಧಿಕೃತ ದಾಖಲೆಯ ಪ್ರತಿಯನ್ನು ಮತ್ತು ನಮ್ಮ ಹಸ್ತಾಕ್ಷರ ಇರುವ ಫೋಟೋ ಹಾಗೂ ಚಾಲನಾ ಪರವಾನಗಿಗೆ ಸಾರಿಗೆ ಇಲಾಖೆ ನಿಗದಿ ಪಡಿಸಿರುವ ಮೊತ್ತವನ್ನು ಪಾವತಿ ಮಾಡಿದರೆ ಎಲ್ ಎಲ್ ಅನ್ನು ನಾವು ಅನ್ ಲೈನ್ ನಲ್ಲಿಯೇ ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಸಾರಿಗೆ ಇಲಾಖೆ ಕಲ್ಪಿಸಲಿದೆ.
ಈ ಬಗ್ಗೆ ಮಾತನಾಡಿರಕುವ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಜೆ ಜ್ಞಾನೇಂದ್ರ ಕುಮಾರ್ ಅವರು, ಇಂತಹ ಅವಕಾಶ ದೇಶದ 12 ರಾಜ್ಯಗಳಲ್ಲಿ ಮಾತ್ರ ಇದ್ದು, ಅದರಲ್ಲಿ ಕರ್ನಾಟಕ ಕೂಡ ಸೇರಿದೆ. ಕರ್ನಾಟಕದ ಒಟ್ಟು 59 ಆರ್ ಟಿಒಗಳ ಪೈಕಿ ಬೆಂಗಳೂರಿನಲ್ಲಿಯೇ10 ಆರ್ ಟಿಒ ಕಚೇರಿಗಳಿದ್ದು, ಕಳೆದ ಮಾರ್ಚ್ ನಿಂದಲೇ ಈ ಯೋಜನೆ ಕುರಿತು ನಾವು ಕಾರ್ಯಾರಂಭ ಮಾಡಿದ್ದೇವೆ. ಯಲಹಂಕ ಆರ್ ಟಿಒದಲ್ಲಿ ಈಗಾಗಲೇ ಈ ಯೋಜನೆ ಜಾರಿಯಲ್ಲಿದ್ದು, ಏಪ್ರಿಲ್ ನಿಂದ ಎಲೆಕ್ಟ್ರಾನಿಕ್ ಸಿಟಿ ಮತ್ತು ಕೋರಮಂಗಲ ಆರ್ ಟಿಒಗಳಲ್ಲಿ ಈ ಯೋಜನೆ ಜಾರಿಯಾಗಿತ್ತು. ಇದೀಗ ಮುಂದಿನ ತಿಂಗಳು ನಗರದ ಉಳಿದೆಲ್ಲ ಆರ್ ಟಿಒ ಕಚೇರಿಗಳಿಗೂ ಇದನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನೂತನ ಯೋಜನೆಯಿಂದ ಮನೆಯಲ್ಲೇ ಅನ್ ಲೈನ್ ಮೂಲಕವೇ ಚಾಲನಾ ಪರವಾನಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ ಲೈನ್ ಅರ್ಜಿ ಭರ್ತಿ ಮಾಡಿ, ಸಂಬಂಧ ಪಟ್ಟ ದಾಖಲೆಗಳನ್ನು ಅಪ್ ಲೋಡ್ ಮಾಡಿ ನಿಗದಿತ ಮೊತ್ತ ಪಾವತಿಮಾಡಬೇಕು. ಅಂತೆಯೇ ಎಲ್ ಎಲ್ ಗಾಗಿ ನಿಗದಿತ ದಿನಾಂಕವನ್ನು ಗುರುತು ಮಾಡಿದರೆ ಎಲ್ ಎಲ್ ಗಾಗಿ ಸಾರಿಗೆ ಕಚೇರಿಯಲ್ಲಿ ದಿನಗಟ್ಟಲೆ ಕಾಯುವ ಪ್ರಮೇಯವೇ ಇರುವುದಿಲ್ಲ. ನಾವು ಗುರುತು ಮಾಡಿದ ಸಮಯದಲ್ಲಿ ನಾವು ಕಲಿಕಾ ಪರವಾನಗಿ ಪರೀಕ್ಷೆ ತೆಗೆದುಕೊಳ್ಳ ಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ಶೀಘ್ರದಲ್ಲಿಯೇ ಚಾಲನಾ ಪರವಾನಗಿ ಪಡೆಯಬಹುದಾಗಿದೆ ಎಂದು ತಿಳಿಸಿದರು.