ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೋರ್ವ ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣಾಗಿದ್ದು, ಎಚ್ಎಸ್ಆರ್ ಲೇಔಟ್ 6ನೇ ಹಂತ ಕೆಪಿಸಿ ಲೇಔಟ್ನಲ್ಲಿ ನೇಣು ಹಾಕಿಕೊಂಡು ಸಾಫ್ಟ್‌ವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾಲ್ಕು ವರ್ಷಗಳಿಂದ ಎಚ್ಎಸ್ಆರ್ ಲೇಔಟ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ವಂಶಿಕೃಷ್ಣ (29 ವರ್ಷ)ಎಂಬಾತನೇ ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಜೀವನದಲ್ಲಿ ಜಿಗುಪ್ಸೆಯಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ವಂಶಿ ಕೃಷ್ಣ ಡೆತ್‌ನೋಟ್ ಬರೆದಿಟ್ಟಿದ್ದಾನೆ.
ಸಹೋದ್ಯೋಗಿಗಳು ನೀಡಿರುವ ಮಾಹಿತಿಯಂತೆ ಕಳೆದ 2 ದಿನಗಳಿಂದ ವಂಶಿಕೃಷ್ಣ ಕೆಲಸಕ್ಕೆ ಹೋಗಿರಲಿಲ್ಲವಂತೆ. ಮೊಬೈಲ್ ಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಅನುಮಾನಗೊಂಡ ಸಹೋದ್ಯೋಗಿಗಳು ಶುಕ್ರವಾರ ಬೆಳಗ್ಗೆ ವಂಶಿಕೃಷ್ಣ ಮನೆ ಬಳಿ ಬಂದಾಗ ಆತ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ವಂಶಿಕೃಷ್ಣ 2 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಗುರುವಾರ ರಾತ್ರಿಯಿಂದ ಮನೆ ಸುತ್ತಮುತ್ತ ದುರ್ವಾಸನೆ ಬರುತ್ತಿತ್ತು ಎಂದು ಸ್ಥಳೀಯರು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಾರತ್ ಹಳ್ಳಿ ಸಮೀಪ 28 ವರ್ಷದ ಟೆಕ್ಕಿ ಅಂಕಿತಾ ಸೋನಿ ಎಂಬುವವರು ಆತ್ಮಹತ್ಯೆ ಶರಣಾಗಿದ್ದರು. ಇದಾದ 15 ದಿನಗಳ ಅಂತರದಲ್ಲಿ ಮತ್ತೋರ್ವ ಟೆಕ್ಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.