ಬೀದರ್: ಕರ್ನಾಟಕದ ಬೀದರ್ ನಲ್ಲಿ ಅಪಾಯಕಾರಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕು ಪೀಡಿತ ಸುಮಾರು 1.5 ಲಕ್ಷ ಹಕ್ಕಿಗಳನ್ನು ಕೊಲ್ಲಲು ತೀರ್ಮಾನಿಸಲಾಗಿದ್ದು ಈ ಮಧ್ಯೆ ಹಕ್ಕಿ ಜ್ವರದಿಂದ ರಾಜ್ಯದ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹಾಗೂ ತಜ್ಞರ ತಂಡ ಹೇಳಿದೆ.
ಹಕ್ಕಿ ಜ್ವರ ಭೀತಿ ಹಿನ್ನೆಲೆ ಮಾತನಾಡಿದ ಕರ್ನಾಟಕ ಪೌಲ್ಟ್ರಿ ರೈತರು ಮತ್ತು ಬ್ರೀಡರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹೆಚ್ ಎನ್ ನಾಗಭೂಷಣ್ ಅವರು ಬೀದರ್ ನ ಕೋಳಿ ಫಾರಂ ಒಂದರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಅವುಗಳ ನಾಶಕ್ಕೆ ಕ್ರಮಕೈಗೊಳ್ಳಲಾಗಿದೆ. ಜನರು ಭಯ ಪಡುವ ಅಗತ್ವವಿಲ್ಲ. ಇನ್ನು ರೋಗ ಹರಡದಂತೆ ಕ್ರಮಕೈಗೊಳ್ಳಲಾಗಿದೆ. ಇನ್ನು ಕೋಳಿ ಮಾಂಸ ಸೇವಿಸುವವರು ಪದಾರ್ಥವನ್ನು 120 ಡ್ರಿಗಿ ಸೆಲ್ಷಿಯನ್ ನಲ್ಲಿ ಬೇಯಿಸಿ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ಕೋಳಿ ಸಾಗಾಣಿಕೆದಾರರಿಗೆ ಸಲಹೆ ಸೂಚನೆ ನೀಡಿದ ನಾಗಭೂಷಣ್ ಅವರು, ಸಾಗಾಣಿಕೆದಾರರು ತಮ್ಮ ಕೋಳಿ ಫಾರಂಗಳಿಗೆ ಹೊರಗಡೆಯಿಂದ ಬರುವ ವಾಹನಗಳಿಗೆ ಕ್ರಿಮಿನಾಶಕಗಳನ್ನು ಸಿಂಪಡಿಸಿ ಅದರಿಂದ ತಕ್ಕ ಮಟ್ಟಿಗೆ ವೈರಾಣು ಹರಡದಂತೆ ತಡೆಯಬಹುದಾಗಿದೆ ಎಂದರು.
ಬೀದರ್ ನ ಹುಮ್ನಾಬಾದ್ ನಲ್ಲಿರುವ ಮೆಳಕೇರಾ ಗ್ರಾಮದಲ್ಲಿನ ರಮೇಶ್ ಗುಪ್ತಾ ಅವರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರದಿಂದಾಗಿ 20 ದಿನಗಳಲ್ಲಿ 35 ಸಾವಿರ ಕೋಳಿಗಳು ಸಾವಿಗೀಡಾಗಿವೆ. ಹೀಗಾಗಿ ಈ ಫಾರಂನಲ್ಲಿರುವ 1.5 ಲಕ್ಷ ಕೋಳಿಗಳನ್ನು ಹಾಗೂ ಆಸುಪಾಸಿನ 3 ಕಿ.ಮೀ ವ್ಯಾಪ್ತಿಯ ಫಾರಂಗಳಲ್ಲಿರುವ ಕೋಳಿಗಳನ್ನು ನಾಶಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.