ರಾಜ್ಯ

ಬನಶಂಕರಿಯಲ್ಲಿನ ತ್ಯಾಜ್ಯ ನಿರ್ವಹಣಾ ಘಟಕ ಮುಚ್ಚಲು ನಿವಾಸಿಗಳ ಆಗ್ರಹ

Sumana Upadhyaya

ಬೆಂಗಳೂರು: ನಗರದ ಬನಶಂಕರಿ 6ನೇ ಹಂತದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಮುಚ್ಚಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. 2014ರಲ್ಲಿ ಇಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಪ್ರಸ್ತಾವನೆಯಾದಾಗಿನಿಂದಲೂ ಇಲ್ಲಿನ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಒಂದು ವರ್ಷದ ಹಿಂದೆ ಘಟಕವನ್ನು ಸ್ಥಾಪಿಸಲಾಗಿದ್ದರೂ ತ್ಯಾಜ್ಯಗಳ ಸಂಸ್ಕರಣೆ ನಡೆದಿಲ್ಲ ಎಂದು ನಿವಾಸಿಗಳು ಹೇಳುತ್ತಾರೆ. ಘಟಕವು 100 ಟನ್ ಗಳಷ್ಟು ತ್ಯಾಜ್ಯಗಳನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.

ಘಟಕವನ್ನು ಅವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ. ಸರಿಯಾಗಿ ನಿರ್ವಹಿಸುತ್ತಿಲ್ಲವಾದ್ದರಿಂದ ಮುಚ್ಚಲು ಆಗ್ರಹಿಸುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಎಸ್. ರಮೇಶ್. ಕಾಂಡಿಮೆಂಟ್ ಅಂಗಡಿಯ ಮಾಲಿಕ ಪ್ರಕಾಶ್ ಎಸ್, ನಮಗೆ ಶುದ್ಧ ಗಾಳಿ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಘನತ್ಯಾಜ್ಯ ಘಟಕಕ್ಕೆ ಆ ಜಾಗ ಪ್ರಶಸ್ತವಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಘೋಷಿಸಿದ್ದರೂ ಕೂಡ ಘಟಕವನ್ನು ಸ್ಥಾಪಿಸಲಾಗಿದೆ.

2016ರ ಘನತ್ಯಾಜ್ಯ ನಿರ್ವಹಣಾ ನಿಯಮ ಪ್ರಕಾರ, ತ್ಯಾಜ್ಯಗಳನ್ನು ನಿರ್ವಹಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದೇವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಹೇಳುತ್ತಾರೆ. ಘಟಕದಲ್ಲಿ ಅದರ ಸಾಮರ್ಥ್ಯಕ್ಕಿಂತ ಹೆಚ್ಚು ತ್ಯಾಜ್ಯಗಳನ್ನು ಹಾಕಲಾಗುತ್ತದೆ. ಆದುದರಿಂದ ಅವುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅವರು. ಹೆಚ್ಚಿನ ತ್ಯಾಜ್ಯಗಳನ್ನು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಘಟಕಕ್ಕೆ ಕೊಂಡೊಯ್ಯುವಂತೆ ಸೂಚಿಸಿದ್ದೇವೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್, ಘಟಕವನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಘಟಕವನ್ನು ನಿರ್ವಹಣೆ ಮಾಡಲು ಪ್ರಮಾಣಿತ ಕಾರ್ಯ ವಿಧಾನವಿರುತ್ತದೆ. ಅದನ್ನು ಅವರು ಪಾಲಿಸಿಕೊಂಡು ಬಂದಿಲ್ಲ. ಅಗತ್ಯ ಕಂಡುಬಂದರೆ ಅವರ ಗುತ್ತಿಗೆಯನ್ನು ಅಂತ್ಯಗೊಳಿಸಲಾಗುವುದು ಎಂದು ಹೇಳಿದರು.

SCROLL FOR NEXT