ರಾಜ್ಯ

ಎರಡನೇ ಬಾರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಹಾನಗಲ್ ನಿಂದ!

Srinivasamurthy VN

ಬೆಂಗಳೂರು: ಇಡೀ ರಾಜ್ಯದ ಗಮನ ಸೆಳೆದಿದ್ದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ಬಂಧಿತನಾಗಿರುವ ಎರಡನೇ ಕಿಂಗ್ ಪಿನ್ ಕುಮಾರಸ್ವಾಮಿ ಅಲಿಯಾಸ್ ಕಿರಣ್  ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಬಂಧಿತ ಕಿರಣ್ ಸಿಐಡಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿಯನ್ನು ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ವಿಚಾರಣೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಕಿರಣ್, 2ನೇ ಬಾರಿಗೆ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಯನ್ನು ಹಾನಗಲ್ ಸಂಗ್ರಹಾಲಯದಿಂದ ಲೀಕ್  ಮಾಡಲಾಗಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರು, ಪ್ರಕರಣದ ಪ್ರಮುಖ ಆರೋಪಿ ಕೂಡ ಆಗಿರುವ  ಶಿವಕುಮಾರಯ್ಯನ ಪುತ್ರನಾದ ಕಿರಣ್, ಪ್ರಕರಣದಲ್ಲಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಕಿರಣ್, ಹಾನಗಲ್ ಸಂಗ್ರಹಾಲಯದ ದ್ವಿತೀಯದರ್ಜೆ ಸಹಾಯಕ ಸಂತೋಷ್ ಎಂಬಾತನ ಸಹಾಯದಿಂದ ಎರಡನೇ ಬಾರಿಗೆ ರಸಾಯನಶಾಸ್ತ್ರ ಪ್ರಶ್ನೆ  ಪತ್ರಿಕೆ ಸೋರಿಕೆ ಮಾಡಲಾಗಿತ್ತು ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ. ಕಳೆದ ಹಲವು ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಚೆನ್ನಾಗಿ ಪಳಗಿದ್ದ ಶಿವಕುಮಾರ ಸ್ವಾಮಿ, 2ನೇ ಬಾರಿಗೆ  ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಗಾಗಿ ಮೊದಲೇ ಉಪಾಯ ಮಾಡಿದ್ದ ಎಂದು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ 2ನೇ ಕಿಂಗ್ ಪಿನ್ ಮತ್ತು ಶಿವಕುಮಾರ ಸ್ವಾಮಿ ಪುತ್ರ ಕುಮಾರಸ್ವಾಮಿ ಅಲಿಯಾಸ್ ಕಿರಣ್ ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಪಿಯುಸಿ  ಪ್ರಶ್ನೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ಅನಂತರ ತಲೆಮರೆಸಿಕೊಂಡಿದ್ದ ಕಿರಣ್‌, ಸಿಐಡಿ ಬಲೆಗೆ ಚಿಕ್ಕಪ್ಪ ಬಿದ್ದ ಸಂಗತಿ ತಿಳಿದು ದಿಗಿಲುಗೊಂಡಿದ್ದ. ಹೀಗಾಗಿ ಕ್ಷಣ ಕ್ಷಣಕ್ಕೂ ತನ್ನ ಆಶ್ರಯ ತಾಣ  ಬದಲಿಸುತ್ತಿದ್ದ. ಆತನ ಚಲವಲನದ ಮೇಲೆ ನಿಗಾವಹಿಸಿದ್ದ ಸಿಐಡಿ ಪೊಲೀಸರಿಗೆ, ಕಿರಣ್‌ ತುಮಕೂರಿನಲ್ಲಿ ಸ್ನೇಹಿತರ ಆಶ್ರಯದಲ್ಲಿರುವ ಸುಳಿವು ಸಿಕ್ಕಿತ್ತು. ಅದರಂತೆ ಮಿಂಚಿನ ಕಾರ್ಯಾಚರಣೆ  ನಡೆಸಿ ಆತನನ್ನು ಬಂಧಿಸಿದ್ದರು.

SCROLL FOR NEXT