ಬೆಂಗಳೂರು: ಸಂಸತ್ತಿನ ಮೇಲೆ ನಡೆದ ಉಗ್ರರ ದಾಳಿ ನಂತರ ಸಿಸಿಟಿವಿ ಕ್ಯಾಮೆರಾಗಳು ವಿಧಾನಸೌಧದ ಮೇಲೆ ಕಣ್ಗಾವಲಿಸಿದ್ದು, ವಿಧಾನಸೌಧ ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತಿತ್ತು. ಇದೀಗ ವಿಧಾನಸೌಧದ ಸುರಕ್ಷತೆಗೆ ಧಕ್ಕೆಯುಂಟಾಗಿದ್ದು, ಇಲ್ಲಿನ ಸಿಸಿಟಿವಿಗಳು ಇದೀಗ ಶೋಪೀಸ್ ಗಳಂತೆ ಕೆಲಸ ಮಾಡುತ್ತಿವೆ.
ಇದಕ್ಕೆ ಕಾರಣ ವಿಧಾನಸೌಧದಲ್ಲಿ ಅಳವಡಿಸಲಾಗಿರುವ ಬಹುತೇಕ ಸಿಸಿಟಿವಿ ಕ್ಯಾಮೆರಾಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿಲ್ಲ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯಷ್ಟೇ ಆದರೆ, ಇವುಗಳನ್ನು ನವೀಕರಿಸಲಾಗಿಲ್ಲ. ಕೆಲವು ಸಿಸಿಟಿವಿ ಕ್ಯಾಮೆರಾಗಳನ್ನು ಕೆಲಸ ಮಾಡುತ್ತಿಲ್ಲ.
ಇದಕ್ಕೆ ಉದಾಹರಣೆಯೆಂಬಂತೆ ಕೆಲವು ದಿನಗಳ ಹಿಂದಷ್ಟೇ ಭದ್ರತಾ ಅಧಿಕಾರಿಯೊಬ್ಬರು ವಿಧಾನಸೌಧದಲ್ಲಿರುವ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಇದರಂತೆ 2ನೇ ಮಹಡಿಯಲ್ಲಿನ ಸಿಸಿಟಿವಿ ಕ್ಯಾಮೆರಾದ ವಿಡಿಯೋಗಳನ್ನು ನೀಡುವಂತೆ ತಿಳಿಸಿದ್ದಾರೆ. ಈ ವೇಳೆ ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡದಿರುವುದು ಬೆಳಕಿಗೆ ಬಂದಿದೆ.
ಸಿಸಿಟಿವಿ ವಿಡಿಯೋ ಕೇಳಿದಾಗ ವಿಧಾನಸೌಧ ಪೊಲೀಸರು ನೀಡಿದ ಪ್ರತಿಕ್ರಿಯೆ ಕಂಡು ಸಾಕಷ್ಟು ಆಘಾತವಾಯಿತು. ವಿಧಾನಸೌಧದಲ್ಲಿ ಮೊದಲ ಮತ್ತು ಎರಡನೇ ಮಹಡಿಯಲ್ಲಿ ನಾಲ್ಕು ವಿಭಾಗಗಳಲ್ಲೂ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಆದರೆ, ಈ ಮಹಡಿಗಳಲ್ಲೇ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಆಘಾತಕಾರಿ ವಿಚಾರ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಧಾನಸೌಧದಲ್ಲಿ ವ್ಯಕ್ತಿಯೊಬ್ಬರು ಅಧಿಕಾರಿಗಳ ಅನುಮತಿಯಿಲ್ಲದೆಯೇ ಕೊಠಡಿಯೊಂದರಲ್ಲಿ ಕಡತವೊಂದನ್ನು ಹೊರಗೆ ಹಾಕುತ್ತಿದ್ದರೆಂಬುದಾಗಿ ನನಗೆ ಮಾಹಿತಿ ಬಂದಿತ್ತು. ಹೀಗಾಗಿ ಆ ವ್ಯಕ್ತಿ ಯಾರೆಂಬುದನ್ನು ಪರಿಶೀಲಿಸಲು ಭದ್ರತಾಧಿಕಾರಿಗಳ ಬಳಿ ಸಿಸಿಟಿವಿ ವಿಡಿಯೋವನ್ನು ಕೇಳಲಾಗಿತ್ತು.
ಮೊದಲ ಮತ್ತು ಎರಡನೇ ಮಹಡಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೂರನೇ ಮಹಡಿಯಲ್ಲಿಯೇ ಮುಖ್ಯಮಂತ್ರಿಗಳ ಕೊಠಡಿಯಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಎಲ್ಲಿ ಅಳವಡಿಸಲಾಗಿದೆ ಎಂಬ ಮಾಹಿತಿ ಸ್ವತಃ ಭದ್ರತಾ ಅಧಿಕಾರಿಗಳಿಗೇ ತಿಳಿದಿಲ್ಲ. ಇನ್ನು ಸಿಸಿಟಿವಿಯಲ್ಲಿ ಜೂಮ್ ಇನ್ ಫೀಚರ್ ಹಾಗೂ ಸ್ಪಷ್ಟ ಚಿತ್ರಣಗಳ ಬಗ್ಗೆಯೂ ರಾಜಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಭದ್ರತಾ ವಿಚಾರಕ್ಕೆ ಬಂದಾಗ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಸಿಸಿಟಿವಿಗಳನ್ನು ನಿರ್ವಹಣೆ ಮಾಡುವುದು ರಾಜ್ಯಕ್ಕೆ ದೊಡ್ಡ ಕೆಲಸವೇನೂ ಅಲ್ಲ. ಇದು ಅಧಿಕಾರಿಗಳ ಕರ್ತವ್ಯ. ಭದ್ರತೆಗೆ ಧಕ್ಕೆ ಬಂದರೆ ಸರ್ಕಾರವನ್ನು ದೂಷಿಸಲಾಗುತ್ತದೆ. ಸರ್ಕಾರದ ನ್ಯೂನತೆಯ ಬಗ್ಗೆ ಯಾರಿಗೂ ಅರಿವಿಗೆ ಬಂದಿಲ್ಲ. ಹೀಗಾಗಿ ನಾವು ಪ್ರಸ್ತುತ ಸುರಕ್ಷಿತರಾಗಿದ್ದೇವೆ ಎಂದು ಕೆಎಎಸ್ ಅಧಿಕಾರಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾತನಾಡಿದ್ದು, ಕರ್ನಾಟಕ ಪಾರದರ್ಶಕತ ಸಾರ್ವಜನಿಕ ಖರೀದಿ ಕಾಯ್ದೆಯಡಿಯಲ್ಲಿ 2 ವರ್ಷಗಳ ಹಿಂದೆಯೇ ಟೆಂಡರ್ ಕರೆಯಲಾಗಿತ್ತು. ಆದರೆ, 2 ಭಾರಿ ಟೆಂಡರ್ ಕರೆದರೂ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಪಾಲ್ಗೊಂಡಿರಲಿಲ್ಲ. ಮೂರನೇ ಬಾರಿ ಟೆಂಡರ್ ಕರೆದಾಗ ಇಬ್ಬರೂ ಮಾತ್ರ ಪಾಲ್ಗೊಂಡಿದ್ದರು. ಇದರಲ್ಲಿ ಒಬ್ಬರನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಭದ್ರತೆ ವಿಚಾರದಲ್ಲಿ ಕಾಯುವಿಕೆ ಹಾಗೂ ರಾಜಿಯಾಗುವಿಕೆಯನ್ನು ಸರ್ಕಾರ ಮಾಡಬಾರದು. ಈ ವಿಚಾರದಲ್ಲಿ ಕೆಟಿಪಿಪಿ ಕಾಯ್ದೆಯಡಿಯಲ್ಲಿ ಅವರು ವಿನಾಯತಿ ಪಡೆಯಬಹುದು ಆದರೆ, ಇದೊಂದು ಗಂಭೀರವಾದ ವಿಚಾರವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಲಾಖೆ ಸಿಬ್ಬಂದಿ, ಆಡಳಿತಾಧಿಕಾರಿಗಳು ಮತ್ತು ಆಯುಕ್ತರಿಗೆ ಕಳೆದ 10 ದಿನಗಳಿಂದರೂ ಪತ್ರವನ್ನು ಬರೆಯಲಾಗುತ್ತಿದೆ. ಆದರೆ, ಅಧಿಕಾರಿಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ. ಹೀಗಾಗಿ ಯಾವುದೇ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನು ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಎಂ.ಎನ್.ಮೇಘರಿಕ್ ಅವರನ್ನು ಸಂಪರ್ಕಿಸಿದಾಗ ವಿಷಯದ ಕುರಿತು ಮಾಹಿತಿ ತಿಳಿದ ಕೂಡಲೇ ಎಎಂಸಿಯನ್ನು ನವೀಕರಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಟೆಂಡರ್ ಪ್ರಕ್ರಿಯೆ ಕೂಡ ಅಂತಿಮ ಘಟ್ಟದಲ್ಲಿದ್ದು, ಶೀಘ್ರದಲ್ಲೇ ಕಾರ್ಯ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಹೇಳಲಾಗುತ್ತಿದೆ.