ಬೆಂಗಳೂರು: ಲಾರಿ ಮಾಲೀಕರಿಂದ 47 ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದ ಚಾಮರಾಜಪೇಟೆ ವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಓಂಕಾರಪ್ಪ ಅವರು ಶನಿವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಸರಕು ಸಾಗಿಸುತ್ತಿದ್ದ ವಾಹನವೊಂದನ್ನು ಅ. 12ರಂದು ಓಂಕಾರಪ್ಪ ಹಿಡಿದಿದ್ದರು. ಈ ವಾಹನವನ್ನು 21ರಂದು ತಪಾಸಣೆ ನಡೆಸಿದಾಗ ಸರಕು ಪಟ್ಟಿ ಮತ್ತು ವಾಹನದಲ್ಲಿದ್ದ ಸರಕುಗಳಿಗೆ ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ 1.17 ಲಕ್ಷ ರುಪಾಯಿ ದಂಡ ವಿಧಿಸಿದ್ದರು.
ನಿಯಮ ಪ್ರಕಾರ ಇಂಥ ಪ್ರಕರಣಗಳಲ್ಲಿ ವಾಹನದ ಮಾಲೀಕರಿಗೆ ನೋಟಿಸ್ ನೀಡಿ, ವಿವರಣೆ ಪಡೆದು ಬಳಿಕ ದಂಡ ವಿಧಿಸಬೇಕು. ನೋಟಿಸ್ ನೀಡಲು 20 ಸಾವಿರ ರುಪಾಯಿ ಲಂಚ ನೀಡುವಂತೆ ವಾಹನ ಮಾಲೀಕರಿಗೆ ಓಂಕಾರಪ್ಪ ಒತ್ತಾಯಿಸಿದ್ದರು.
ಆರಂಭದಲ್ಲಿ 3 ಸಾವಿರ ರುಪಾಯಿ ಲಂಚ ಪಡೆದಿದ್ದ ಓಂಕಾರಪ್ಪ, ಬಾಕಿ ಹಣ ನೀಡಲು ವಿಳಂಬ ಮಾಡಿದರು ಎಂಬ ಕಾರಣಕ್ಕೆ ಇದೇ ಮಾಲೀಕರಿಗೆ ಸೇರಿದ ಮತ್ತೊಂದು ಸರಕು ಸಾಗಣೆ ವಾಹನ ತಡೆಹಿಡಿದಿದ್ದರು.
ಮೊದಲ ಪ್ರಕರಣದ ಬಾಕಿ 17 ಸಾವಿರ ರುಪಾಯಿ ಮತ್ತು ಎರಡನೇ ಪ್ರಕರಣದಲ್ಲಿ 30 ಸಾವಿರ ಸೇರಿ ಒಟ್ಟು 47 ಸಾವಿರ ರುಪಾಯಿ ಲಂಚ ನೀಡುವಂತೆ ವಾಹನದ ಮಾಲೀಕರಿಗೆ ಒತ್ತಾಯಿಸಿದ್ದರು. ಈ ಬಗ್ಗೆ ವಾಹನದ ಮಾಲೀಕರು ಎಸಿಬಿಗೆ ದೂರು ನೀಡಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಓಂಕಾರಪ್ಪ ಅವರನ್ನು ಬಂಧಿಸಲಾಗಿದೆ.