ರೆಡ್ಡಿ ಕುಟುಂಬದ ಮದುವೆಗಾಗಿ ಅರಮನೆ ಮೈದಾನದಲ್ಲಿ ಕಂಡು ಬಂಡ ಖಾಸಗಿ ಭದ್ರತೆ
ಬೆಂಗಳೂರು: ಮಾಜಿ ಸಚಿವ ಗಣಿ ಧಣಿ ಜನಾರ್ಧನ್ ರೆಡ್ಡಿ ಅವರ ಪುತ್ರಿಯ ಮದುವೆ ಅರಮನೆ ಮೈದಾನದಲ್ಲಿ ಬುಧವಾರ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆಯಿದ್ದು ವಿಮಾನ ನಿಲ್ದಾಣ ರಸ್ತೆಯಲ್ಲಿ ತೀವ್ರ ವಾಹನದಟ್ಟಣೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಮಂಗಳವಾರ ಮತ್ತು ಬುಧವಾರ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ತೀವ್ರಾವಾಗುವ ಸಾಧ್ಯತೆಯಿದೆ. ರೆಡ್ಡಿ ಸಹೋದರರು ಅರಮನೆ ಮೈದಾನವನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದು, ವಿಜಯನಗರ ಸಾಮ್ರಾಜ್ಯದ ವೈಭವವನ್ನು ಅತಿಥಿಗಳಿಗೆ ತೋರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮೈದಾನದಲ್ಲಿ ಖಾಸಗಿ ಭದ್ರತೆಯನ್ನು ಹಾಕಲಾಗಿದ್ದು, ಎಲ್ಲ ದ್ವಾರಗಳಲ್ಲೂ ಬೌನ್ಸರ್ ಗಳನ್ನೂ ನಿಯೋಜಿಸಲಾಗಿದೆ. ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಪ್ರವೇಶವನ್ನು ನಿಷೇಧಗೊಳಿಸಲಾಗಿದೆ.
ಸಾಮಾನ್ಯವಾಗಿ ಅರಮನೆ ಮೈದಾನದಲ್ಲಿ ನಡೆಯುವ ಮದುವೆಗಳು ಒಡೆಯರ್ ಕುಟುಂಬಕ್ಕೆ ಸೇರಿದ ಖಾಸಗಿ ಅರಮನೆಯಲ್ಲಿ ನಡೆಯುತ್ತವೆ. ಈಗ ಅರಮನೆ ಮೈದಾನದಲ್ಲಿ ರೆಡ್ಡಿ ಸಹೋದರರು ವಿಜಯನಗರ ಸಾಮ್ರಾಜ್ಯವನ್ನು ಸೃಷ್ಟಿಸಲು ಮುಂದಾಗಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾದಾದ್ಯಂತ ಮದುವೆಗೆ ಆಮಂತ್ರಣ ನೀಡಿದ್ದಾರೆ. ಹಾಗೆಯೇ ಜನಾರ್ಧನ್ ರೆಡ್ಡಿ ಅಭಿಮಾನಿಗಳ ಸಂಘ ಫೇಸ್ಬುಕ್ ಪುಟದಲ್ಲಿ ಕೂಡ ಮದುವೆಗೆ ಕರೆಯೋಲೆ ನೀಡಲಾಗಿದೆ.
ಬಳ್ಳಾರಿಯ ರೆಡ್ಡಿ ಮನೆಯಿಂದ ಹೊರಡುವ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳ್ಳಾರಿಯಿಂದ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ನ್ನಲಾಗಿದೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಜನಾರ್ಧನ್ ರೆಡ್ಡಿ ಅವರಿಗೆ ೨೦೧೫ ರಲ್ಲಿ ಷರತ್ತುಬದ್ಧ ಜಾಮೀನು ನೀಡಿ ಬಳ್ಳಾರಿಗೆ ಹೋಗದಂತೆ ನಿಷೇಧಿಸಲಾಗಿತ್ತು. ಆದರೆ ಮಗಳ ಮದುವೆಗೋಸ್ಕರ ನವೆಂಬರ್ ೧ ರಿಂದ ನವೆಂಬರ್ ೨೧ ರವರೆಗೆ ಬಳ್ಳಾರಿ ಪ್ರವೇಶಕ್ಕೆ ಕೋರ್ಟ್ ಅವಕಾಶ ನೀಡಿದೆ.