ಬೆಂಗಳೂರು: ನೈರುತ್ಯ ಮುಂಗಾರು ಮಳೆ ಕೊರತೆ ಕಂಡಿದ್ದ ರಾಜ್ಯ ಈಶಾನ್ಯ ಮಾರುತದ ಕುಂಠಿತವನ್ನು ಕಂಡಿದೆ. ಅಕ್ಟೋಬರ್ 1ರಿಂದ ಕರ್ನಾಟಕದಲ್ಲಿ 33.5 ಮಿಲಿ ಮೀಟರ್ ಸರಾಸರಿ ಮಳೆ ಬಿದ್ದಿದ್ದು ನಿಗದಿತ ಪ್ರಮಾಣ 161.3 ಮಿಲಿ ಮೀಟರ್ ಆಗಿದೆ.
ಅಕ್ಟೋಬರ್ 28ರಿಂದ ನೈರುತ್ಯ ಮುಂಗಾರು ಭಾರತದಿಂದ ಸಂಪೂರ್ಣ ಕಣ್ಮರೆಯಾಗಿದೆ. ಈಶಾನ್ಯ ಮಾರುತ ಆಗಮಿಸಿದ್ದರೂ ಕೂಡ ಅದು ದುರ್ಬಲವಾಗಿದೆ. ಈ ಋತುವಿನಲ್ಲಿ ಅಕ್ಟೋಬರ್ 1ರಿಂದ ನವೆಂಬರ್ 14ರವರೆಗೆ ಸರಾಸರಿ 161.3 ಮಿಲಿ ಮೀಟರ್ ಮಳೆ ಬೀಳಬೇಕಾಗಿತ್ತು. ಆದರೆ ಕೇವಲ 33.5 ಮಿಲಿ ಮೀಟರ್ ಮಳೆಯಾಗಿದೆ. ಶೇಕಡಾ 80ರಷ್ಟು ಮಳೆ ಕೊರತೆಯಾಗಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ 735 ಮಿಲಿ ಮೀಟರ್ ಮಳೆಯಾಗುತ್ತದೆ. ಈ ವರ್ಷ ರಾಜ್ಯದಲ್ಲಿ 599 ಮಿಲಿ ಮೀಟರ್ ಮಳೆಯಾಗಿದ್ದು ಈಶಾನ್ಯ ಮಾರುತ ಕೂಡ ಕಡಿಮೆ. ಮುಂದಿನ ದಿನಗಳಲ್ಲಿ ಬರಗಾಲವುಂಟಾಗುವ ಸಾಧ್ಯತೆಯಿದೆ.
ಈ ವರ್ಷ ಪರಿಸ್ಥಿತಿ ಕ್ಷೀಣಿಸುವ ಸಾಧ್ಯತೆಯಿದೆ. ಕಳೆದ ವರ್ಷ ಕರ್ನಾಟಕದಲ್ಲಿ 136 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಈ ವರ್ಷ 139 ಬರಪೀಡಿತ ತಾಲ್ಲೂಕುಗಳಿವೆ ಎಂದು ಕಂದಾಯ ಇಲಾಖೆಯ ಅಂಕಿಅಂಶ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈ ವರ್ಷ ರೈತರ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿದೆ. ಬಿತ್ತನೆ ಕಾರ್ಯ ಮುಗಿದಿದೆ. ರಬಿ ಮಳೆ ಕೊರತೆಯಿದ್ದಾಗ ನಾವು ಈರುಳ್ಳಿ, ಹುರುಳಿ ಕಾಳುಗಳನ್ನು ಬಿತ್ತುತ್ತೇವೆ. ಆದರೆ ಈ ವರ್ಷ ಮಳೆ ತೀರಾ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾದರೆ ಮಾತ್ರ ಅಣೆಕಟ್ಟುಗಳು ಭರ್ತಿಯಾಗಿ ರೈತರಿಗೆ ಸಹಾಯವಾಗಬಹುದು ಎನ್ನುತ್ತಾರೆ.
ಮುಂದಿನ ಮಾರ್ಚ್-ಏಪ್ರಿಲ್ ವೇಳೆಗೆ ರೈತರು ಸಹಕಾರಿ ಬ್ಯಾಂಕ್ ಗಳಿಂದ ಪಡೆದ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅಕ್ಟೋಬರ್ ಕೊನೆಯ ವೇಳೆಗೆ ಸುಮಾರು 20 ಲಕ್ಷ ಮಂದಿ ರೈತರಿಗೆ ಸಹಕಾರ ವಲಯದಲ್ಲಿ 10 ಸಾವಿರದ 400 ಕೋಟಿ ರೂಪಾಯಿ ಸಾಲ ನೀಡಲು ಸರ್ಕಾರ ಗುರಿ ಹೊಂದಿತ್ತು.ಇಲ್ಲಿಯವರೆಗೆ 6 ಸಾವಿರದ 400 ಕೋಟಿ ರೂಪಾಯಿ ಸಾಲ ವಿತರಿಸಿದೆ.
ಕೇಂದ್ರದ ನೆರವು ನಿರೀಕ್ಷೆ: ರಾಜ್ಯದ ಬರಗಾಲ ಪರಿಸ್ಥಿತಿಯನ್ನು ನಿಭಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ''ರಾಜ್ಯ ಸರ್ಕಾರ ನೆರೆ ಪ್ರವಾಹದ ಮತ್ತು ಬರಗಾಲದ ಅನುಭವವನ್ನು ಪಡೆದಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಯ ಮಾರ್ಗಸೂಚಿ ಪ್ರಕಾರ, ಬರ ಪರಿಹಾರಕ್ಕೆ 4 ಸಾವಿರದ 656 ಕೋಟಿ ರೂಪಾಯಿಗಳನ್ನು ಮತ್ತು ನೆರೆ ಪ್ರವಾಹದಿಂದುಂಟಾದ ಹಾನಿ ಪರಿಹಾರಕ್ಕೆ 380 ಕೋಟಿ ರೂಪಾಯಿ ಪರಿಹಾರ ಕೇಳಿದ್ದೇವೆ. ರಾಜ್ಯದ ರೈತರ ಪರಿಸ್ಥಿತಿ ಹದಗೆಟ್ಟಿದೆ. ಕೇಂದ್ರದ ತಂಡವೊಂದು ಆಗಮಿಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದೆ. ಈ ಕುರಿತು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.