ಬೆಂಗಳೂರು: ನೋಟು ನಿಷೇಧದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಬೆನ್ನಲ್ಲೇ ಗುರುವಾರ ಕನಕ ಜಯಂತಿ ನಿಮಿತ್ತ ಇದ್ದ ರಜೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.
ಇಂದು ಕನಕ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇದೆಯಾದರೂ, ನೋಟು ನಿಷೇಧದ ಬಳಿಕ ದೇಶಾದ್ಯಂತ್ಯ ಆರ್ಥಿಕ ಬಿಕ್ಕಟ್ಟು ವ್ಯಾಪಕವಾಗಿದೆ. ಈ ಹಿನ್ನಲೆಯಲ್ಲಿ ಪರಿಸ್ಥಿತಿ ಹತೋಟಿಗೆ ಬರುವವರೆಗೂ ಬ್ಯಾಂಕುಗಳಿಗೆ ರಜೆ ನೀಡಲು ಆರ್ ಬಿಐ ಹಿಂದೇಟು ಹಾಕುತ್ತಿದ್ದು, ಬ್ಯಾಂಕುಗಳು ಹಾಗೂ ಅಂಚೆ ಕಚೇರಿಗಳ ಸರ್ಕಾರಿ ರಜೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ. ಇದೇ ರೀತಿಯ ಕ್ರಮವನ್ನು ರಾಜ್ಯ ಸರ್ಕಾರ ಕೂಡ ಕೈಗೊಂಡಿದ್ದು, ಗುರುವಾರ ಕನಕಜಯಂತಿ ಆಚರಣೆ ಹೊರತಾಗಿಯೂ ರಾಜ್ಯ ಸರ್ಕಾರದ ಆಧೀನದಲ್ಲಿರುವ ಬ್ಯಾಂಕುಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಇಂದೂ ಕೂಡ ಎಂದಿನಂತೆ ಬ್ಯಾಂಕುಗಳ ಕಾರ್ಯ ನಿರ್ವಹಿಸಲಿವೆ.
ಇನ್ನು ಕನಕ ಜಯಂತಿ ರಾಜ್ಯ ಸರ್ಕಾದ ವ್ಯಾಪ್ತಿಯಲ್ಲಿ ಬರುವುದರಿಂದ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಬ್ಯಾಂಕುಗಳು ಮತ್ತು ಅಂಚೆಕಚೇರಿಗಳ ಕಾರ್ಯ ಎಂದಿನಂತೆ ಸಾಗಲಿವೆ.
ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ನೋಟುಗಳನ್ನು ನಿಷೇಧ ಮಾಡಿದ ಬಳಿಕ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ಸತತ 9 ದಿನಗಳೇ ಕಳೆದರೂ ಜನರ ಭವಣೆ ಮಾತ್ರ ನೀಗಿಲ್ಲ. ಇಂದೂ ಕೂಡ ಜನರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಂತು ಹಣ ಬದಲಾವಣೆ ಮತ್ತು ಹಳೆಯ ನೋಟುಗಳನ್ನು ಠೇವಣಿ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಹೊಸ ನೋಟುಗಳಿಗಾಗಿ ಮತ್ತು ಹಳೆಯ ನೋಟುಗಳನ್ನು ಠೇವಣಿ ಮಾಡುವ ಸಲುವಾಗಿ ಜನ ಬ್ಯಾಂಕುಗಳಿಗೆ ಧಾವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನಕಜಯಂತಿ ರಜೆಯನ್ನು ರದ್ದುಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಿದರು.