ರಾಜ್ಯ

ಹುಟ್ಟುಹಬ್ಬ ಆಚರಣೆಗಾಗಿ ಡಿ.1ರಂದು ನಗರಕ್ಕೆ ಬರಲು ರಜೆ ಪಡೆದಿದ್ದ ಮೇಜರ್ ಅಕ್ಷಯ್

Shilpa D

ಬೆಂಗಳೂರು: ಡಿಸೆಂಬರ್ 6ರಂದು ತಮ್ಮ 32 ನೇ ವರ್ಷದ ಹುಟ್ಟುಹಬ್ಬವನ್ನು  ಆಚರಿಸಲು ರಜೆ ಪಡೆದಿದ್ದ ಹುತಾತ್ಮ ಮೇಜರ್ ಅಕ್ಷಯ್ ಇಂದು ಬೆಂಗಳೂರಿಗೆ ಬರಬೇಕಿತ್ತು.

ಆದರೆ ವಿಧಿಯಾಟದ ಮುಂದೆ ಅಕ್ಷಯ್ ಬಯಸಿದ್ದು ನಡೆಯಲಿಲ್ಲ. ನಗ್ರೋಟಾದಲ್ಲಿ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದಾರೆ.

ನನಗೆ ರಜೆ ಸಿಕ್ಕಿದ್ದು, ಡಿಸೆಂಬರ್ 1 ರ ಬೆಳಗ್ಗೆ ಇಲ್ಲ ಮಧ್ಯಾಹ್ನ ಬೆಂಗಳೂರಿಗೆ ಬರುವುದಾಗಿ ಹೇಳಿದ್ದರು ಎಂದು ಅಕ್ಷಯ್ ಸ್ನೇಹಿತೆ ಹಾಗೂ ಜೈನ್ ಕಾಲೇಜಿನ ಸಹಪಾಠಿ ಅಮೂಲ್ಯ ಕಶ್ಯಪ್ ಹೇಳಿದ್ದಾರೆ. ಡಿಸೆಂಬರ್ 6 ರಂದು ಬೆಂಗಳೂರಿನಲ್ಲೇ ತನ್ನ ಹುಟ್ಟು ಹಬ್ಬ ಆಚರಿಸಲು ಪ್ಲ್ಯಾನ್ ಮಾಡಿದ್ದರು. ನಾವಿಬ್ಬರು ಬಿಎಸ್ಸಿ ಮೊದಲ ವರ್ಷದಲ್ಲಿ ಸಹಪಾಠಿಗಳಾಗಿದ್ದೆವು. ಅದೇ ವರ್ಷದಲ್ಲಿ ಅಕ್ಷಯ್ ಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ನೌಕರಿ ಸಿಕ್ಕಿತು. ಹೀಗಾಗಿ ಕೋರ್ಸ್ ಅನ್ನು ಅರ್ಧಕ್ಕೆ ಬಿಟ್ಟು ಹೋದ ಅಕ್ಷಯ್ ಸ್ನೇಹಿತರ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಅಮೂಲ್ಯ ಹೇಳಿದ್ದಾರೆ.

ಆತ ಸೇನೆ ಸೇರಲು ಅತ್ಯುತ್ಸಾಹದಿಂದ, ಎನ್ ಡಿಎ ಯಿಂದ ಕರೆಗಾಗಿ ಕಾಯುತ್ತಿದ್ದ. ಸೇನೆಯ ಒಂದು ಭಾಗವಾಗಿರುವುದಕ್ಕೆ ಆತ ತುಂಬಾ ಹೆಮ್ಮೆ ಪಡುತ್ತಿದ್ದ, ಎರಡು ವರ್ಷಗಳ ಹಿಂದೆ ಇಂದಿರಾನಗರದ ಪಬ್ ವೊಂದರಲ್ಲಿ ಭೇಟಿ ಮಾಡಿದ್ದೆ ಕೊನೆ, ಮತ್ತೆ ಆತನನ್ನು ನೋಡುವ ಅವಕಾಶವೇ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಅಕ್ಷಯ್ ಗೆ ಅವಳಿ ಸಹೋದರಿಯರಿದ್ದಾರೆ. ನೇಹಾ ಮತ್ತು ಆಕೆಯ ಪತಿ ಅಕ್ಷಯ್ ಬರುವಿಕೆಗಾಗಿ ಕಾಯುತ್ತಿದ್ದರು. ಅಕ್ಟೋಬರ್ 2015 ರಲ್ಲಿ ತಮ್ಮ ಸಹೋದರಿ ವಿವಾಹಕ್ಕಾಗಿ ಅಕ್ಷಯ್ 1 ತಿಂಗಳು ರಜೆ ಪಡೆದು ಬಂದಿದ್ದರು ಎಂದು ಅಮೂಲ್ಯ ನೆನಪಿಸಿಕೊಂಡರು.

SCROLL FOR NEXT