ಬೆಂಗಳೂರು: ಅಕ್ರಮ ಭೂ ಒತ್ತುವರಿ ಪ್ರಕರಣದಲ್ಲಿ ಸರ್ಕಾರದ ವಶಕ್ಕೆ ಹೋಗುವ ಭೀತಿ ಎದುರಿಸುತ್ತಿದ್ದ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಮಾಲೀಕತ್ವದ ಎಸ್ ಎಸ್ ಆಸ್ಪತ್ರೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಮೂಲಗಳ ಪ್ರಕಾರ ಎಸ್ ಎಸ್ ಆಸ್ಪತ್ರೆಯನ್ನು ಸರ್ಕಾರದ ವಶಕ್ಕೆ ಪಡೆಯುವ ಜಿಲ್ಲಾಡಳಿತದ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಆಸ್ಪತ್ರೆಯ ಸಂಪೂರ್ಣ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ ಸಕ್ಷಣ ಪ್ರಾಧಿಕಾರ ದಾಖಲೆ ಪರಿಶೀಲಿಸಿ ವರದಿ ಬಂದ ಬಳಿಕ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ರಾಜರಾಜೇಶ್ವರಿ ನಗರದಲ್ಲಿರುವ ಎಸ್ ಎಸ್ ಆಸ್ಪತ್ರೆ ಸರ್ಕಾರಿ ಖರಾಬು ಭೂಮಿಯಲ್ಲಿದ್ದು, ಅದನ್ನು ಕೆಡವದೇ ಸರ್ಕಾರದ ವಶಕ್ಕೆ ಪಡೆಯಲು ಈ ಹಿಂದೆ ಬೆಂಗಳೂರು ಜಿಲ್ಲಾಡಳಿತ ನಿರ್ಧರಿಸಿತ್ತು. ಈ ಸಂಬಂಧ ಎಸ್ ಎಸ್ ಆಸ್ಪತ್ರೆ ಆಡಳಿತ ಮಂಡಳಿಗೂ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿತ್ತು. ಆದರೆ ಜಿಲ್ಲಾಡಳಿತದ ನೋಟಿಸ್ ಪ್ರಶ್ನಿಸಿ ಆಸ್ಪತ್ರೆ ಆಡಳಿತ ಮಂಡಳಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು, ಆಸ್ಪತ್ರೆಗೆ ಸಂಬಂಧಿಸಿದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಸಲ್ಲಿಸಿ ತಹಶೀಲ್ದಾರ್ ಪರಿಶೀಲನೆ ನಡೆಸುವಂತೆಯೂ ಮತ್ತು ಪ್ರಾಧಿಕಾರದ ವರದಿ ಬಂದ ಬಳಿಕ ಕಾನೂನಿನ್ವಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಬಡವರಿಗಿಲ್ಲದ ಅವಕಾಶ ಪ್ರಭಾವಿಗಳಿಗೇಕೆ: ಮನೆ ಕಳೆದುಕೊಂಡ ನಿವಾಸಿಗಳ ಆಕ್ರೋಶ
ಇನ್ನು ಎಸ್ ಎಸ್ ಆಸ್ಪತ್ರೆ ಹಾಗೂ ದರ್ಶನ್ ನಿವಾಸ ಸೇರಿದಂತೆ 69 ನಿವಾಸಗಳನ್ನು ಕೆಡವದೇ ಇರುವ ಕುರಿತು ನಿರ್ಧಾರ ಕೈಗೊಂಡ ಜಿಲ್ಲಾಡಳಿತದ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರಭಾವಿಗಳ ಮನೆ ಒಡೆಯಲು ಮೀನಾಮೇಷ ಎಣಿಸುತ್ತಿರುವ ಸರ್ಕಾರ ಯಾವುದೇ ರೀತಿ ಮುನ್ಸೂಚನೆ ನೀಡದೇ ಬಡವರ ಮನೆ ಒಡೆದ ಕುರಿತ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪ್ರಭಾವಿಗಳಿಗಿರುವ ಅವಕಾಶ ನಮಗೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.