ರಾಜ್ಯ

ಕೊನಾರ್ಕ್ ಬೀಚ್ ನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ

Sumana Upadhyaya
ಭುವನೇಶ್ವರ: ಒಡಿಶ್ಶಾದ ಪುರಿ ಜಿಲ್ಲೆಯ ಚಂದ್ರಬಾಗಾ ಬೀಚ್ ನಲ್ಲಿ ಈಜಲು ಹೋಗಿದ್ದ ಕರ್ನಾಟಕ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಎಂಜಿನಿಯರ್ ಅವರನ್ನು ರಕ್ಷಿಸಲು ಹೋಗಿ ಅಲೆಯ ಹೊಡೆತಕ್ಕೆ ಸಿಲುಕಿದ ಯುವಕನನ್ನು ಸ್ಥಳೀಯ ಮೀನುಗಾರರು ಬಚಾವ್ ಮಾಡಿದ್ದಾರೆ.
ಮೃತಪಟ್ಟ ಎಂಜಿನಿಯರ್ ನ್ನು ಬೆಂಗಳೂರಿನ ಮಾನಸ ಎನ್.ಎಸ್ ಎಂದು ಗುರುತಿಸಲಾಗಿದೆ. ಇವರ ಜೊತೆ ಇನ್ನೂ ಎಂಟು ಜನರಿದ್ದು ಎಲ್ಲರೂ ಕೊನಾರ್ಕ್ ನ ಪ್ರಸಿದ್ಧ ಸೂರ್ಯ ದೇವಾಲಯವನ್ನು ವೀಕ್ಷಿಸಲು ಬಂದಿದ್ದರು.
ಬೆಂಗಳೂರಿನ ಗ್ಲೋಬಲ್ ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿರುವ ಆರು ಮಂದಿ ಯುವತಿಯರು ಮತ್ತು ಮೂವರು ಯುವಕರ ತಂಡ ಸಮುದ್ರದಲ್ಲಿ ನೀರಿಗಿಳಿದು ಈಜಾಡುತ್ತಿದ್ದರು. ಸಮುದ್ರದ ಅಲೆಯ ತೀವ್ರ ಹೊಡೆತಕ್ಕೆ ಮಾನಸ ಕೊಚ್ಚಿ ಹೋದರು.
ಆಕೆ ಬೊಬ್ಬೆ ಹಾಕುತ್ತಿರುವುದನ್ನು ಕೇಳಿದ ಗುಂಪಿನಲ್ಲಿದ್ದ ಯುವಕ ಆಕೆಯನ್ನು ಕಾಪಾಡಲು ಮುಳುಗಿದರು. ಆದರೆ ಅವರು ಕೂಡ ಅಲೆಯ ಹೊಡೆತಕ್ಕೆ ಸಿಲುಕಿದರು. ಆಗ ಸ್ಥಳೀಯ ಮೀನುಗಾರರು ಯುವಕನನ್ನು ರಕ್ಷಿಸಿದರಾದರೂ ಯುವತಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಯುವಕನ ಸ್ಥಿತಿ ಸ್ಥಿರವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಫ್ಟ್ ವೇರ್ ಎಂಜಿನಿಯರ್ ಗಳೆಲ್ಲಾ ಸಂಸ್ಥೆಯ ಭುವನೇಶ್ವರ ಕೇಂದ್ರದಲ್ಲಿ ತರಬೇತಿ ಪಡೆಯಲು ಆಗಮಿಸಿದ್ದರು. ಯುವತಿಯ ಕುಟುಂಬದವರಿದೆ ದುರ್ಘಟನೆಯ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT