ಬೆಂಗಳೂರು: ತನ್ನ ಸಾಲವನ್ನು ತೀರಿಸಲು ಸುಪಾರಿ ಹಂತಕ ಎಂದು ಹೇಳಿಕೊಳ್ಳುತ್ತಿದ್ದ 28 ವರ್ಷದ ಯುವಕನೊಬ್ಬ ವ್ಯಾಪಾರಿಗೆ ಬೆದರಿಕೆ ಹಾಕಿ ಆತನಿಂದ ಹಣ ಕಿತ್ತುಕೊಳ್ಳಲು ಪ್ರಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹಣ ದೋಚಲು ವ್ಯಾಪಾರಿಗೆ ಪದೇ ಪದೇ ಬೆದರಿಕೆಯೊಡ್ಡುತ್ತಿದ್ದ ರಾಮಚಂದ್ರಾಪುರ ನಿವಾಸಿ ಕೆಂಪೇ ಗೌಡನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಕೆಂಪೇ ಗೌಡ ಅನಿಲ್ ಗೋಯಲ್ ಎಂಬ ಉತ್ತರಹಳ್ಳಿಯಲ್ಲಿ ವಾಸಿಸುತ್ತಿದ್ದ ಗ್ರಾನೈಟ್ ವ್ಯಾಪಾರಿಗೆ ಪದೇ ಪದೇ 20 ಲಕ್ಷ ರೂಪಾಯಿ ನೀಡುವಂತೆ ಕಿರುಕುಳ ನೀಡುತ್ತಿದ್ದ. ನಿನ್ನ ವಿರೋಧಿಗಳು ನನಗೆ 10 ಲಕ್ಷ ರೂಪಾಯಿ ನೀಡಿ ನಿನ್ನನ್ನು ಕೊಲ್ಲಲು ಹೇಳಿದ್ದಾರೆ, ರಕ್ಷಣೆ ನೀಡಬೇಕೆಂದು ಬೆದರಿಕೆಯೊಡ್ಡಿದ್ದಾನೆ. ಗೋಯಲ್ ಉತ್ತರಹಳ್ಳಿಯಲ್ಲಿ ಅಪಾರ್ಟ್ ಮೆಂಟಿನಲ್ಲಿ ವಾಸಿಸುತ್ತಿದ್ದು ಕೆಂಪೇ ಗೌಡ ಅದೇ ಕಟ್ಟಡದಲ್ಲಿ ಹೌಸ್ ಕೀಪಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ. ಆತ ಇತ್ತೀಚೆಗೆ ಕೆಲಸ ಬಿಟ್ಟಿದ್ದ.
ಆತನ ಕಿರುಕುಳ ತಾಳಲಾರದೆ ಗೋಯಲ್ ತನ್ನ ಸ್ನೇಹಿತರ ಜೊತೆ ಚರ್ಚಿಸಿ ಪೊಲೀಸರಿಗೆ ದೂರು ನೀಡಿದರು. ಕೆಂಪೇ ಗೌಡ ವಿವಿಧ ಬೇರೆ ಬೇರೆ ಸಿಮ್ ಕಾರ್ಡ್ ಗಳಿಂದ ಬೇರೆ ಬೇರೆ ಕಡೆಗಳಿಂದ ದೂರವಾಣಿ ಕರೆ ಮಾಡುತ್ತಿದ್ದ. ಪೊಲೀಸರು ಕೆಂಪೇ ಗೌಡನನ್ನು ಹಿಡಿಯಲು ಬಲೆ ಬೀಸುತ್ತಾರೆ.
ಒಂದು ದಿನ ಕೆಂಪೇಗೌಡ ಫೋನ್ ಮಾಡಿದಾಗ ಗೋಯಲ್ ಹಣ ಕೊಡುತ್ತೇನೆಂದು ಒಪ್ಪಿ ನೈಸ್ ರೋಡ್ ಗೆ ಬರಲು ಹೇಳುತ್ತಾನೆ. ಅಷ್ಟು ಹೊತ್ತಿಗೆ ಅಲ್ಲಿ ಪೊಲೀಸರ ತಂಡ ಬಂದು ಕಾಯುತ್ತದೆ. ಕೆಂಪೇ ಗೌಡ ಬಂದಾಗ ಆತನನ್ನು ಪೊಲೀಸರು ಹಿಡಿಯುತ್ತಾರೆ.
ಕೆಂಪೇ ಗೌಡ ಈ ಹಿಂದೆ ಕೂಡ ಇದೇ ರೀತಿ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಸರಹದ್ದಿನಲ್ಲಿ ವ್ಯಾಪಾರಿಯೊಬ್ಬನಿಂದ ಬೆದರಿಕೆ ಹಾಕಿ ಹಣ ಎಗರಿಸಿದ್ದನು.