ಬೆಳಗಾವಿ: ಕನ್ನಡ ಪರ ಸಂಘಟನೆಗಳ ಹಾಗೂ ರೈತ ಪರ ಸಂಘಟನೆಗಳ ಕಾವೇರಿ ಪ್ರತಿಭಟನೆ ಇಡೀ ರಾಜ್ಯವನ್ನೇ ಸ್ಥಬ್ದಗೊಳಿಸಿದ್ದು, ಕಾವೇರಿಗಾಗಿ ಇದೀಗ ಉತ್ತರ ಕರ್ನಾಟಕ ಕೂಡ ಕೈ ಜೋಡಿಸಿದೆ.
ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಬಂದ್ ಗೆ ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಬೆಳಗಾವಿ, ಗುಲ್ಬರ್ಗಾ, ವಿಜಯಪುರ, ಬಾಗಲಕೋಟೆ ಹಾಗೂ ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ. ಪ್ರಮುಖ ಮಾರುಕಟ್ಟೆಗಳು ಬಹುತೇಕ ಸ್ಥಗಿತಗೊಂಡಿದ್ದು, ತುರ್ತು ಸೇವೆಗಳಾದ ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.
ಇನ್ನು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಮಿಳುನಾಡು ಸರ್ಕಾರ ಹಾಗೂ ಸಿಎಂ ಜಯಲಲಿತಾ ಪ್ರತಿಕೃತಿ ಧಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ, ಗುಲ್ಬರ್ಗಾ, ವಿಜಯಪುರದಲ್ಲಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿಯಲ್ಲಿ ಕನ್ನಡಪರ ಸಂಘಟನೆಗಳು ಟೈರ್ ಗೆ ಬೆಂಕಿ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿವೆ. ಅಂತೆಯೇ ಬಳ್ಳಾರಿಯ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ತಮಿಳುನಾಡು ರಾಜ್ಯದ ಲಾರಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಹಲವು ಲಾರಿಗಳು ಜಖಂಗೊಂಡಿವೆ,
ಇನ್ನು ದಾವಣಗೆರೆಯಲ್ಲಿ ಕನ್ನಡಪರ ಸಂಘಟನೆಗಳು ವಿನೂತನವಾಗಿ ಪ್ರತಿಭಟನೆ ನಡೆಸಿದ್ದು, ತಲೆ ಮೇಲೆ ಕಲ್ಲು ಹೊತ್ತು ಸಾಗುವ ಮೂಲಕ ಕಾರ್ಯಕರ್ತರು ತಮಿಳುನಾಜು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಒಟ್ಟಾರೆ ಕಾವೇರಿಗಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.