ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಆಗ್ರಹಿಸಿ ಕನ್ನಡಪರ ಹೋರಾಟಗಾರರು ಕರೆ ನೀಡಿದ್ದ ಬಂದ್ ನಡುವೆಯೇ ಕಾರ್ಯ ನಿರ್ವಹಿಸುತ್ತಿದ್ದ ಎಂಎನ್ ಸಿ ಸಂಸ್ಥೆಗಳು ಶುಕ್ರವಾರ ಕನ್ನಡಪರ ಸಂಘಟನೆಗಳ ಹೋರಾಟ ಎದುರಿಸುವಂತಾಗಿತ್ತು.
ಬಂದ್ ನಡುವೆಯೇ ಕಾರ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಗೆ ನುಗ್ಗಿದ ಕನ್ನಡಪರ ಸಂಘಟನೆಗಳು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎನ್ ಝಡ್ ಸಂಸ್ಥೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಲ್ಲದೆ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲ ನೌಕರರನ್ನೂ ಹೊರಗೆ ಕಳುಹಿಸಿ ಸಂಸ್ಥೆಯನ್ನು ಮುಚ್ಚಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರ ಆಗಮನವಾಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಈ ವೇಳೆ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ಉಂಟಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆಯೇ ಕೆಲ ಹೋರಾಟಗಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಅತ್ತಿ ಬೆಲೆಯಲ್ಲಿ ಬೃಹತ್ ರ್ಯಾಲಿ
ಇದೇ ವೇಳೆ ತಮಿಳುನಾಡು ಗಡಿಯಲ್ಲೂ ಕಾವೇರಿಗಾಗಿ ಪ್ರತಿಭಟನೆ ತೀವ್ರಗೊಂಡಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಅತ್ತಿ ಬೆಲೆಯಲ್ಲಿ ಜಯ ಕರ್ನಾಟಕ ಸೇನೆಯ ಕಾರ್ಯಕರ್ತ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗಿ ಕತ್ತೆಗೆ ಅವರ ಭಿತ್ತಿ ಚಿತ್ರ ಅಂಟಿಸಿ ಪ್ರತಿಭಟಿಸಿದರು. ಇನ್ನು ವಿವಿಪುರ ವೃತ್ತದಲ್ಲಿ ಕನ್ನಡಪರ ಹೋರಾಟಗಾರರ ಪ್ರತಿಭಟನೆಗೆ ವಿಕಲ ಚೇತನರೂ ಸಾಥ್ ನೀಡಿ ರ್ಯಾಲಿ ನಡೆಸಿದರು.