ಬೆಂಗಳೂರು: ಕಾವೇರಿ ನೀರಿಗಾಗಿ ರಾಜ್ಯಾದ್ಯಂತ ನಡೆದ ಬಂದ್ ನಲ್ಲಿ ಭಾಗವಹಿಸದಿರುವ ಕುರಿತು ಎದ್ದಿದ್ದ ವಿವಾದ ಸಂಬಂಧ ಮಂಡ್ಯ ಮಾಜಿ ಸಂಸದೆ ರಮ್ಯಾ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವುದಕ್ಕಿಂತ ರೈತರಿಗೆ ಬೆಂಬಲ ನೀಡುವುದು ದೊಡ್ಡದು ಎಂದು ಹೇಳಿದ್ದಾರೆ.
ಮಾಜಿ ಸಂಸದೆಯಾಗಿದ್ದುಕೊಂಡು ನಿನ್ನೆ ಕನ್ನಡಪರ ಸಂಘಟನೆಗಳು ಹಾಗೂ ರೈತರು ಕರೆ ನೀಡಿದ್ದ ಕರ್ನಾಟಕ ಬಂದ್ ನಲ್ಲಿ ಪಾಲ್ಗೊಳ್ಳದಿರುವ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಮ್ಯಾ, ‘ರೈತರಿಗೆ ನನ್ನ ಬೆಂಬಲ ಬೀದಿಯಲ್ಲಿ ಪ್ರತಿಭಟಿಸುವುದಕ್ಕಿಂತಲೂ ಮಿಗಿಲಾದದ್ದು. ಅದು ದೀರ್ಘ ಕಾಲದ ಪರಿಹಾರಕ್ಕೆ ಸಂಬಂಧಿಸಿದ್ದು’ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿರುವ ರಮ್ಯಾ, ನನ್ನ ಬೆಂಬಲ ರೈತರಿಗೆ ಯಾವಾಗಲೂ ಇರುತ್ತೆ.VC ನಾಲೆ, ಚಿಕ್ಕ ದೇವರಾಜ ಸಾಗರ ಮತ್ತು ವಿರಿಜಾ ನಾಲೆಯಿಂದ ನೀರನ್ನು ಬಿಡಲಾಗಿದೆ, 90% ರೈತರು ಆಗಲೆ ನಾಟಿ ಮಾಡಿದ್ದಾರೆ. ಉಳಿದ ರೈತರು ಇವತ್ತು ಮಂಡ್ಯದಲ್ಲಿ ನಾಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ ರಮ್ಯಾ, ‘ನನ್ನ ಹೇಳಿಕೆಯನ್ನು ಮಾಧ್ಯಮಗಳು ಟಿಆರ್‌ಪಿಗಾಗಿ ತಿರುಚುವ ಕೆಲಸ ಮಾಡುತ್ತಿವೆ’ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಂತೆಯೇ ಮಂಡ್ಯ ಜಿಲ್ಲೆಯ ನಾಲೆಗಳಲ್ಲಿ ನೀರು ಹರಿಯುತ್ತಿರುವ ಮತ್ತು ಹೊಲಗಳಲ್ಲಿ ರೈತರು ಕೆಲಸ ಮಾಡುತ್ತಿರುವ ಕೆಲ ಫೋಟೋಗಳನ್ನು ರಮ್ಯಾ ಅಪ್‌ಲೋಡ್ ಮಾಡಿದ್ದು, ತಾವೀಗ ಚುನಾಯಿತ ಪ್ರತಿನಿಧಿ ಆಗಿಲ್ಲದಿದ್ದರೂ ತಮ್ಮ ಕೈಲಾಗಿದ್ದನ್ನು ಮಾಡಲು ಪ್ರಯತ್ನಿಸಿರುವುದಾಗಿ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಜತೆಗೆ, ಈಗ ಎದುರಾಗಿರುವ ನೀರಿನ ಸಮಸ್ಯೆಗೆ ನಾವೇ ಜವಾಬ್ದಾರರಾಗಿದ್ದು, ನಾವು ಯಾಕೆ ಈ ಪರಿಸ್ಥಿತಿಯಲ್ಲಿ ಇದ್ದೇವೆ. ಪರಿಸ್ಥಿತಿ ಬದಲಾಯಿಸಲು ನಾವೇನು ಮಾಡಬಹುದು ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ ಎಂದು ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ.