ಬೆಂಗಳೂರು: ಪಕ್ಷ ವಿರೋಧಿ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ.
ನಿನ್ನೆ ನಡೆದ ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿರುವ ಅವರು, ಕೆಲ ನಾಯಕರು ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರಿಗಾದರೂ ಸಮಸ್ಯೆಯಿದ್ದರೆ, ಪಕ್ಷದೊಳಗೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆ ವಿನಃ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಪಕ್ಷ ವಿರೋಧಿ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಪಕ್ಷ ವಿರೋಧಿ ಹೇಳಿಕೆ ನೀಡುವ ನಾಯಕರು ಕಠಿಣ ಕ್ರಮ ಎದುರಿಸಲಿದ್ದಾರೆ. ಪಕ್ಷ ವಿರೋಧಿ ಹೇಳಿಕೆ ನೀಡಿರುವವರ ಕುರಿತಂತೆ ಈಗಾಗಲೇ ನಾಯಕರ ಬಳಿ ವರದಿಯನ್ನು ಕೇಳಲಾಗಿದೆ. ವರದಿ ಬಂದ ನಂತರ ಕೂಡಲೇ ಆ ನಾಯಕರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಲಾಗುತ್ತದ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಗೋರಕ್ಷಣೆ ಹೆಸರಿನಲ್ಲಿ ಪೊಲೀಸರೊಂದಿಗೆ ಕೈಜೋಡಿಸಿ ಸುಲಿಗೆ ಮಾಡುತ್ತಿರುವ ಕುರಿತಂತೆ ಕೆಲ ಮುಸ್ಲಿಂ ಸಮುದಾಯಗಳು ದೂರನ್ನು ನೀಡಿದೆ. ಕಾನೂನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕಿದೆ. ಬಿಜೆಪಿ ಹಾಗೂ ಕೆಲ ಸಂಘಟನೆಗಳು ಕೈಜೋಡಿಸಿ ರಾಜ್ಯದಲ್ಲಿ ಕೋಮುಘರ್ಷಣೆ ಸೃಷ್ಟಿಸಲು ಯತ್ನಿಸುತ್ತಿದ್ದು, ಈ ಬಗ್ಗೆ ಬಹಳ ಎಚ್ಚರವಹಿಸಬೇಕಾಗಿದೆ ಎಂದು ಹೇಳಿದ್ದಾರೆ.
2018ರ ಚುನಾವಣಾ ತಯಾರಿ ಕುರಿತಂತೆ ಮಾತನಾಡಿ, ಚುನಾವಣಾ ತಯಾರಿಗಾಗಿ ಪಕ್ಷವು ಸೆಪ್ಟೆಂಬರ್ 27 ರಂದು ರಾಜ್ಯ ಕಾರ್ಯಕಾರಿ ಸಭೆಯೊಂದನ್ನು ಧಾರವಾಡದಲ್ಲಿ ಆಯೋಜಿಸಿದೆ. ಅಭ್ಯರ್ಥಿಗಳ ಆಯ್ಕೆ ಹಾಗೂ ಇನ್ನಿತರೆ ವಿಚಾರಗಳನ್ನು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.