ಬೆಂಗಳೂರು: ಮುಂದಿನ ವರ್ಷ ಎಪ್ರಿಲ್ ವೇಳೆಗೆ ನಮ್ಮ ಮೆಟ್ರೋದ ಮೊದಲನೇ ಹಂತದ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ಇಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ದ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಮೆಟ್ರೋ ಮೊದಲನೆ ಹಂತ ಎಪ್ರಿಲ್ 2017ಕ್ಕೆ ಪೂರ್ಣಗೊಳ್ಳಲಿದೆ. ಇನ್ನು ಎರಡನೇ ಹಂತದ ಯೋಜನೆಗೆ 26,400 ಕೋಟಿ ರೂ ವೆಚ್ಚವಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಲಾ ಶೇ.20ರಷ್ಟು ವೆಚ್ಚವನ್ನು ಭರಿಸಲಿವೆ. ಉಳಿದ ಶೇ. 60 ರಷ್ಟು ಮೊತ್ತವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಸಂಪನ್ಮೂಲ ಕ್ರೋಢೀಕರಿಸಲಿದೆ ಎಂದರು.
ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೃಷ್ಣರಾಜಪುರಂವರೆಗೆ 18 ಕಿ ಮೀ ನಮ್ಮ ಮೆಟ್ರೋ ಎರಡನೇ ಹಂತದ ಎ ಭಾಗ ಎಂದು ಆಧ್ಯತೆಯ ಮೇರೆಗೆ ರೂಪಿಸಿ, 3500 ಕೋಟಿ ರೂ ಹೆಚ್ಚುವರಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 20 ರೊಳಗಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು,
ನಮ್ಮ ಮೆಟ್ರೋ ಎರಡನೇ ಹಂತವು 2020ರ ವೇಳೆಗೆ ಪೂರ್ಣಗೊಳ್ಳಲಿದೆ. ಆದರೆ, ಎರಡನೇ ಹಂತದ ಎ ಭಾಗದ ಈ ಯೋಜನೆಯನ್ನು ಮೊದಲನೇ ಹಂತದ ಅನುಭವದ ಆಧಾರದ ಮೇರೆಗೆ ಎರಡು ವರ್ಷಗಳ ಮುನ್ನವೇ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಮೆಟ್ರೋ ಎರಡನೇ ಹಂತವು ಅನುಷ್ಠಾನಗೊಂಡಲ್ಲಿ ಪ್ರತಿದಿನ 15 ಲಕ್ಷ ಪ್ರಯಾಣಿಕರು ಸಂಚರಿಸಲು ಅನುಕೂಲವಾಗಲಿದೆ. ಇದರಿಂದ ರಾಜ್ಯದ ರಾಜಧಾನಿಯ ಸಂಚಾರದ ಮೇಲಿನ ಒತ್ತಡವೂ ಗಣನೀಯವಾಗಿ ಕಡಿಮೆಯಾಗಲಿದೆ ಎಂದರು.