ಬೆಂಗಳೂರು; ಕಾವೇರಿ ವಿವಾದದಿಂದಾಗಿ ರಾಜ್ಯ ಕಂಗಾಲಾಗುವಂತೆ ಮಾಡಿದ್ದು, ಇದೀಗ ರಾಜ್ಯದಲ್ಲಿ ಎದುರಾಗಿರುವ ಪರಿಸ್ಥಿತಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಪತ್ರ ಬರೆಯಲು ತೀರ್ಮಾನಿಸಿದ್ದಾರೆ.
ರಾಜ್ಯ ಸರ್ಕಾರದ ಅನುದಾನಿಕ 1,900 ಖಾಸಗಿ ಶಾಲೆಗಳು ಈ ರೀತಿ ನಿರ್ಧಾರ ಕೈಗೊಂಡಿದ್ದು, 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಂದ ಪತ್ರ ಬರೆಸಲು ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕೆಎಎಂಎಸ್) ತೀರ್ಮಾನಿಸಿದೆ.
ಕಾವೇರಿ ವಿವಾದ ಕುರಿತಂತೆ ರಾಜ್ಯದಲ್ಲಿ ಪ್ರತಿಭಟನೆ ಹೆಚ್ಚಾದ ಹಿನ್ನೆಲೆಯಲ್ಲಿ ಬ್ಲಾಸಮ್ಸ್ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಕೆಲ ವಿದ್ಯಾರ್ಥಿಗಳು ಶಿಕ್ಷಕರ ಬಳಿ ಕಾವೇರಿ ಇಲ್ಲದಿದ್ದರೆ, ತರಗತಿಯೂ ಇಲ್ಲ ಎಂದು ಹೇಳಿದ್ದಾರೆ. ಇದರಂತೆ ವಿದ್ಯಾರ್ಥಿಗಳ ಈ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಎಂಎಸ್ ಈ ರೀತಿಯ ನಿರ್ಧಾರವನ್ನು ಕೈಗೊಂಡಿದೆ ಎಂದು ಕೆಎಎಂಎಸ್ ಸದಸ್ಯರು ಹೇಳಿದ್ದಾರೆ.
ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಅಭಿಪ್ರಾಯವನ್ನು ನಾನು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದೆ. ನಂತರ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಎಎಂಎಸ್ ವಿದ್ಯಾರ್ಥಿಗಳ ಮುಖಾಂತರ ಪತ್ರ ಬರೆಸಲು ತೀರ್ಮಾನಿಸಿ ಹೊಸ ಅಭಿಯಾನವನ್ನು ಆರಂಭಿಸಲು ತೀರ್ಮಾನಿತು ಎಂದು ಬ್ಲಾಸಮ್ಸ್ ಪಬ್ಲಿಕ್ ಶಾಲೆಯ ಶಿಕ್ಷಕರೊಬ್ಬರು ಹೇಳಿದ್ದಾರೆ.
ಪತ್ರವನ್ನು ಹೀಗೆ ಬರೆಯಬೇಕು ಹಾಗೆ ಬರೆಯಬೇಕೆಂದು ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬಾರದು. ಪತ್ರ ಬರೆಯುವ ವೇಳೆ ವಿದ್ಯಾರ್ಥಿಗಳನ್ನು ಸ್ವತಂತ್ರವಾಗಿ ಬಿಡಬೇಕು. ವಿದ್ಯಾರ್ಥಿಗಳು ಸ್ವತಃ ತಾವೇ ತಮ್ಮ ಅಭಿಪ್ರಾಯಗಳೊಂದಿಗೆ ಪ್ರಧಾನಿ ಹಾಗೂ ಸಿಜೆಐ ಗೆ ಪತ್ರ ಬರೆಯಲಿ ಎಂದು ಎಲ್ಲಾ ಶಾಲೆಗಳಿಗೂ ತಿಳಿಸಲಾಗಿದೆ. ಪತ್ರ ಬರೆಯುವ ಕುರಿತಂತೆ ಎಲ್ಲಾ ಶಾಲೆ ಸದಸ್ಯರೊಂದಿಗೂ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಪತ್ರವನ್ನು ಬರೆಸಲಾಗುತ್ತದೆ ಎಂದು ಕೆಎಎಂಎಸ್ ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಹೇಳಿದ್ದಾರೆ.