ರಾಜ್ಯ

ಮೈಸೂರು ದಸರಾಗೂ ಕಾವೇರಿ ಬಿಸಿ: ಪ್ರವಾಸಿಗರಿಲ್ಲದೇ ಹೋಟೆಲ್ ಗಳು ಖಾಲಿ ಖಾಲಿ

Manjula VN

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ನೀಡಿದ್ದ ತೀರ್ಪು ಇಡೀ ರಾಜ್ಯವೇ ಹೊತ್ತಿ ಉರಿಯುವಂತೆ ಮಾಡಿತ್ತು. ಕಾವೇರಿ ಕಿಚ್ಚಿನ ಬಿಸಿ ಇದೀಗ ಮೈಸೂರು ದಸರಾ ಮೇಲೂ ಬಿದ್ದಿದ್ದು, ತುಂಬಿ ತುಳಕಬೇಕಿದ್ದ ಹೊಟೆಲ್ ರೂಮ್ ಗಳು ಬಿಕೋ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ.

ದಸರಾ ಹಬ್ಬ ಆರಂಭವಾಗುವುದಕ್ಕೂ ಮುನ್ನವೇ ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿರುವ ಎಲ್ಲಾ ಹೋಟೆಲ್ ರೂಮ್ ಗಳು ಈ ಹೊತ್ತಿಗೆ ಬುಕ್ ಆಗಿ ಬಿಡುತ್ತಿದ್ದವು. ಆದರೆ, ಕಾವೇರಿ ಪ್ರತಿಭಟನೆ ಬಿಸಿಯಿಂದಾಗಿ ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾಗ ತೊಡಗಿದೆ.

ಈಗಾಗಲೇ ಬುಕ್ ಮಾಡಿರುವ ರೂಮ್ ಗಳೂ ಕೂಡ ಇದೀಗ ರದ್ದಾಗುತ್ತಿದ್ದು, ಪ್ರವಾಸೋದ್ಯಮ ಇಲಾಖೆಗೆ ಭಾರೀ ಹೊಡೆತ ಬೀಳುವ ಸಾಧ್ಯತೆಗಳಿವೆ.

ದಸರಾ ಹಬ್ಬ ಹತ್ತಿರ ಬರುತ್ತಿದ್ದಂತೆ ಪ್ರತೀ ವರ್ಷ ಉತ್ತರ ಭಾರತ ಮತ್ತು ವಿದೇಶದಿಂದ ಸಾಕಷ್ಟು ಜನರು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಪ್ರವಾಸಿಗರು ಬೇರೆ ಸ್ಥಳಗಳತ್ತ ಮುಖ ಮಾಡತೊಡಗಿದ್ದಾರೆಂದು ಮೈಸೂರು ಹೋಟೆಲ್ ಗಳ ಸಂಘದ ಸದಸ್ಯರೊಬ್ಬರು ಹೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಎದುರಾಗಿರುವ ಕಾವೇರಿ ವಿವಾದ ಇದೀಗ ಪ್ರವಾಸೋದ್ಯಮ ಇಲಾಖೆ ಮೇಲೆ ಪರಿಣಾಮ ಬೀರುತ್ತಿದ್ದು, ದಸರಾ ಮಹೋತ್ಸವಕ್ಕೂ ಹೊಡೆತ ಬೀಳತೊಡಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ದಸರಾ ಸಮಯದಲ್ಲಿ ಹೋಟೆಲ್ ಗಳು, ಟ್ಯಾಕ್ಸಿಗಳು ಬುಕ್ ಆಗಿ ಬಿಡುತ್ತಿದ್ದವು. ಆದರೆ, ಈ ಬಾರಿ ಬೆರಳಿಣಿಕೆಯಷ್ಟು ಬುಕ್ ಆಗುತ್ತಿದ್ದು, ನಗರದ ಮೇಲೆ ನಂಬಿಕೆಯನ್ನು ಕಳೆದುಕೊಂಡ ಜನರು ಪ್ರಯಾಣ ಮಾಡಲು ಹಿಂಜರಿಯುತ್ತಿದ್ದಾರೆ. ದಸರಾ ಸಮಯದಲ್ಲಿ ಮೈಸೂರು ಮತ್ತು ಬೆಂಗಳೂರಿನ ಮಧ್ಯೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲನ್ನು ಬಿಡಲಾಗುತ್ತದೆ. ಇದರಂತೆ ಈ ವರ್ಷ ಕೂಡ ಐಷಾರಾಮಿ ರೈಲನ್ನು ಬಿಡಲಾಗಿದೆ. ಆದರೆ, ಈ ರೈಲಿನಲ್ಲೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿಲ್ಲ. ಹೀಗಾಗಿ ಇನ್ನೆರಡು ದಿನಗಳವರೆಗೂ ಕಾದು ನಂತರ ರೈಲನ್ನು ಬಿಡಬೇಕೋ, ಬೇಡವೋ ಎಂಬುನ್ನು ನಿರ್ಧರಿಸುತ್ತೇವೆಂದು ಅವರು ಹೇಳಿದ್ದಾರೆ.

ಕೊಡಗು ಹೋಂಸ್ಟೇ ಅಸೋಸಿಯೇಷನ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ಕೆ.ಎಂ. ಕುರುಮ್ಬಯ್ಯ ಅವರು ಮಾತನಾಡಿ, ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅವಧಿಯಲ್ಲಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಇನ್ನಿತರೆ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಾಜ್ಯಕ್ಕೆ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಜನರ ಸಂಖ್ಯೆ ಅತ್ಯಂತ ವಿರಳವಾಗಿದ್ದು, ವ್ಯವಹಾರ ಚಟುವಟಿಕೆಗಳು ಬಿಕೋ ಎನ್ನುತ್ತಿವೆ ಎಂದು ಹೇಳಿದ್ದಾರೆ.

SCROLL FOR NEXT