ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಹಲವು ಹೋರಾಟಗಾರರನ್ನು ಬಂಧಿಸಿ ಪೊಲೀಸರು ಕೊಲೆಯತ್ನದ ಕೇಸು ದಾಖಲಿಸಿದ್ದರು. ಆದರೆ ಆರೋಪಕ್ಕೆ ಸರಿಯಾದ ಸಾಕ್ಷಿಗಳನ್ನು ಒದಗಿಸಲು ಪೊಲೀಸರು ವಿಫಲವಾದ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿದೆ.
ಪೊಲೀಸರು ಮಾಡಿದ್ದ ಆರೋಪ ಬೆಂಬಲಿಸಲು ಸಮರ್ಥ ಸಾಕ್ಷ್ಯಾಧಾರಗಳನ್ನು ಪೊಲೀಸರು ಒದಗಿಸಿಲ್ಲ, ಹೀಗಾಗಿ ಸೆಪ್ಟಂಬರ್ 13 ರಿಂದ ನ್ಯಾಯಾಂಗ ವಶದಲ್ಲಿದ್ದ ಹೋರಾಟಗಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಬಿ ಕಟ್ಟಿ, ಪ್ರತಿಭಟನಾಕಾರರು ಯಾರನ್ನು ಕೊಲೆ ಮಾಡುವ ಉದ್ದೇಶದಿಂದ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ,.ಜೊತೆಗೆ ಪೊಲೀಸರು ಗಾಯಗೊಂಡಿರುವ ಸಂತ್ರಸ್ತರ ಬಗ್ಗೆ ಯಾವುದೇ ಪ್ರಮಾಣ ಪತ್ರಗಳನ್ನು ಒದಗಿಸಲಿಲ್ಲ, ಹೀಗಾಗಿ ಆರೋಪಿಗಳು ಕೊಲೆ ಪ್ರಯತ್ನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿ ಜಾಮೀನು ನೀಡಿದ್ದಾರೆ.