ರಾಜ್ಯ

ಲಾರಿ ಮಾಲೀಕರ ಸಂಘದ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ: ರಾಮಲಿಂಗಾ ರೆಡ್ಡಿ

Srinivasamurthy VN

ಬೆಂಗಳೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು  (ಆರ್‌ಟಿಒ) ವಿಧಿಸುವ ದಂಡದ ಪ್ರಮಾಣ ಕಡಿಮೆ ಮಾಡಬೇಕು ಎಂಬ ಲಾರಿ ಮಾಲೀಕರ ಸಂಘದ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸತತ ಐದು ದಿನಗಳಿಂದ ನಡೆಯುತ್ತಿರುವ ಲಾರಿ ಮುಷ್ಕರ ಸಂಬಂಧ ಸೋಮವಾರ ಪ್ರತಿಕ್ರಿಯಿಸಿದ  ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮುಷ್ಕರ ನಿರತ ಲಾರಿ ಮಾಲೀಕರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಮತ್ತು  ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತೀರ್ಮಾನ ಕೈಗೊಳ್ಳಬೇಕಿದೆ. ವಿವಿಧ ಉಲ್ಲಂಘನೆಗಳಿಗೆ ಆರ್‌ಟಿಒ ವಿಧಿಸುವ  ದಂಡದ ಪ್ರಮಾಣವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಆದರೆ, ಅದನ್ನು ಪರಿಷ್ಕರಿಸುವ ಅಧಿಕಾರವನ್ನು ರಾಜ್ಯ  ಸರ್ಕಾರಕ್ಕೆ ನೀಡಿದೆ. ಇದರ ಆಧಾರದಲ್ಲಿ ದಂಡ ಪ್ರಮಾಣ ಇಳಿಕೆ ಮಾಡುತ್ತೇವೆ ಎಂದು ಅವರು ಹೇಳಿದರು.

ಇದೇ ವೇಳೆ, "ಲಾರಿ ಮಾಲೀಕರು 2–3 ದಿನ ಮುಷ್ಕರ ಮುಂದುವರಿಸಿದರೆ ಸಾರಿಗೆ ಬಸ್‌ ಗಳ ಓಡಾಟ ಮಾತ್ರವಲ್ಲದೆ, ಎಲ್ಲ ಸೇವೆಗಳೂ ವ್ಯತ್ಯಯವಾಗಲಿವೆ. ಲಾರಿ ಮಾಲೀಕರ ಇತರೆ ಬೇಡಿಕೆಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ  ಬರುವುದಿಲ್ಲ. ಹೀಗಾಗಿ ಅದರ ಬಗ್ಗೆ ತಾವು ಮಾತನಾಡುವುದಿಲ್ಲ ಎಂದು ಅವರು ಹೇಳಿದರು.

ಇನ್ನು ಕಳೆದ ಐದು ದಿನಗಳಿಂದ ನಡೆಯುತ್ತಿರುವ ಲಾರಿ ಮುಷ್ಕರದಿಂದಾಗಿ ದಕ್ಷಿಣ ರಾಜ್ಯಗಳಿಗೆ ಪ್ರತಿ ನಿತ್ಯ ಆಗಮಿಸಬೇಕಿದ್ದ ಸುಮಾರು 25ಲಕ್ಷ  ಲಾರಿಗಳ ಓಡಾಟ ಸ್ಥಗಿತವಾಗಿದ್ದು, ಇದರಿಂದ ಸರ್ಕಾರಕ್ಕೆ ಭಾರಿ ನಷ್ಟವಾಗಿದೆ. ನಿತ್ಯ  7.5 ಸಾವಿರ ಕೋಟಿಯಂತೆ ಈವರೆಗೂ ಸುಮಾರು 37.5 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT