ರಾಜ್ಯ

ನಗರಗಳಲ್ಲಿ ಮರಳಿಗೆ ದುಬಾರಿ ಬೆಲೆ; ಅಕ್ರಮ ಮರಳು ಸಾಗಣೆಯಿಂದ ಭರ್ಜರಿ ಲಾಭ!

Sumana Upadhyaya
ಮಂಗಳೂರು: ಉಡುಪಿ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳ ಮೇಲಿನ ದಾಳಿ ಮರಳು ಮಾಫಿಯಾದ ಕರಾಳ ದಂಧೆಯನ್ನು ತೆರೆದಿಟ್ಟಿದ್ದು, ತೀವ್ರ ಅಡೆತಡೆಗಳ ಹೊರತಾಗಿಯೂ ಕರಾವಳಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.
ಮರಳನ್ನು ಅಕ್ರಮವಾಗಿ ಅಂತರ ಜಿಲ್ಲೆಗಳಿಗೆ ವರ್ಗಾಯಿಸುವುದರ ಮೇಲೆ ಕಣ್ಗಾವಲು ಇರಿಸಲು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ಕರಾಳ ಜಗತ್ತಿನಲ್ಲಿ ಮರಳು ದಂಧೆ ವ್ಯಾಪಾರ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಲೆ ಹೆಚ್ಚಳವೇ ಮರಳಿನ ಕಳ್ಳಸಾಗಣಿಕೆಗೆ ಕಾರಣವಾಗಿದೆ. ಒಂದು ಲೋಡ್ ಮರಳಿಗೆ ಮಂಗಳೂರು, ಉಡುಪಿಯಲ್ಲಿ 12,000 ರೂಪಾಯಿಗಳಿದ್ದರೆ ಅಷ್ಟೇ ಪ್ರಮಾಣದ ಮರಳಿಗೆ ಬೆಂಗಳೂರು, ಕೇರಳದಲ್ಲಿ 70,000 ರೂಪಾಯಿಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 19 ಕಾನೂನುಬದ್ಧ ಮರಳು ನಿಕ್ಷೇಪಗಳಿವೆ. ಅವು ಪ್ರಮುಖ ನದಿ ತೀರಗಳಲ್ಲಿವೆ.
ಅಧಿಕೃತ ಮರಳು ಗಣಿಗಾರರ ಪ್ರಕಾರ, ಜಿಲ್ಲೆಯಲ್ಲಿ 12ಕ್ಕಿಂತ ಹೆಚ್ಚು ಮರಳು ನಿಕ್ಷೇಪಗಳಿದ್ದು, ಅಲ್ಲಿ ಅಕ್ರಮ ಮರಳು ಗಣಿಗಾರರು ಬಂದು  ಲೂಟಿ ಮಾಡುತ್ತಾರೆ ಮತ್ತು ಅಕ್ರಮವಾಗಿ ಮರಳನ್ನು ಬೇರೆ ಕಡೆಗೆ ಸಾಗಿಸುತ್ತಾರೆ.
ನೇತ್ರಾವತಿ ನದಿ ದಂಡೆಯಲ್ಲಿ ಅದ್ಯರ್ ಮತ್ತು ಕಣ್ಣೂರು ಎಂಬ ಅಕ್ರಮ ಮರಳು ಗಣಿಗಾರಿಕೆ ಪ್ರದೇಶಗಳಿದ್ದು ರಾತ್ರೋರಾತ್ರಿ ಮರಳನ್ನು ಬೇರೆಡೆಗೆ ಸಾಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಕರಾವಳಿ ಸಕ್ರಮ ವಲಯದಡಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ಮರಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಾರೆ.  
ದಕ್ಷಿಣ ಕನ್ನಡ ಜಿಲ್ಲೆಯ 72 ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಬಂಟ್ವಾಳ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಕಡೆ, ಬಂಟ್ವಾಳ ಗ್ರಾಮಾಂತರ ಠಾಣೆ ಬಳಿ 4 ಕಡೆಗಳಲ್ಲಿ, ವಿಟ್ಲದಲ್ಲಿ 12 ಕಡೆಗಳಲ್ಲಿ, ಸುಳ್ಯದಲ್ಲಿ 9, ಬೆಳ್ತಂಗಡಿಯ 11 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆಯಾದರೂ ಯಾರೂ ಕೂಡ ಅದನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೋಗುವುದಿಲ್ಲ.
ಅಕ್ರಮ ಮರಳುಗಾರಿಕೆಗೆ ಅವಕಾಶ ಮಾಡಿಕೊಡಲು ಸಕ್ರಮ ಮರಳುಗಾರಿಕೆಗೆ ಅನುಮತಿ ನೀಡಲು ಅಧಿಕಾರಿಗಳು ತಡ ಮಾಡುತ್ತಾರೆ ಎಂಬ ಆರೋಪಗಳೂ ಇವೆ.  ಆದರೂ ಅಲ್ಲಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಯುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿದ ಉದಾಹರಣೆಗಳೂ ಇವೆ.
SCROLL FOR NEXT