ರಾಜ್ಯ

ಬೆಂಗಳೂರು: ಅಗರ ಕೆರೆಗೆ ಪುನರುಜ್ಜೀವನ

Sumana Upadhyaya
ಬೆಂಗಳೂರು: ಬೆಂಗಳೂರಿಗರ ನಾಲ್ಕು ವರ್ಷದ ಹೋರಾಟಕ್ಕೆ ಕೊನೆಗೂ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆಯಿದೆ. ಅಗರ ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
ಅನೇಕ ಸಂಘಗಳು ಸೇರಿ ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅವರಲ್ಲಿ ಅಗರ ಸರೋವರ ರಕ್ಷಣೆ ಮತ್ತು ನಿರ್ವಹಣಾ ಸೊಸೈಟಿ(ಎಎಲ್ ಪಿಎಂಎಸ್) ಮುಂಚೂಣಿಯಲ್ಲಿದೆ.
ಬಯೋ ಸಿಸ್ಟಮ್ಸ್ ಎಂಬ ಖಾಸಗಿ ಸಂಸ್ಥೆಯಿಂದ ಸರೋವರದ ನಿರ್ವಹಣೆಯನ್ನು ವಾಪಸ್ ಪಡೆದುಕೊಳ್ಳುವ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಲ್ಲದೆ ಸುತ್ತಮುತ್ತಲ ನಿವಾಸಿಗಳು ಅರಣ್ಯ ಮತ್ತು ಜೈವಿಕ ಇಲಾಖೆಯ ಅಧಿಕಾರಿಗಳ ಮೇಲೆ ಸತತವಾಗಿ ಭೇಟಿ ಮಾಡಿ ಒತ್ತಡ ಹಾಕುತ್ತಿದ್ದಾರೆ  ಎಂದು ಎಎಲ್ ಪಿಎಂಎಸ್ ನ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿ. ಭದ್ರಯ್ಯ ತಿಳಿಸಿದ್ದಾರೆ.
ಇಲ್ಲಿನ ನಿವಾಸಿಗಳ ಸತತ ಅಧಿಕಾರಿಗಳ ಭೇಟಿ ಮತ್ತು ಒತ್ತಡದಿಂದಾಗಿ 2013ರಲ್ಲಿ ಒಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಕೆರೆಯ ಸುತ್ತಮುತ್ತ ಸ್ವಚ್ಛಗೊಳಿಸುವ ಕಾರ್ಯ, ಗಿಡ ನೆಡುವಿಕೆ ಇತ್ಯಾದಿಗಳನ್ನು ಸತತವಾಗಿ ಎನ್ ಜಿಒ ಮತ್ತು ಘಟಕಗಳ ನೆರವಿನೊಂದಿಗೆ ಮಾಡಲಾಗುತ್ತಿದೆ. ಬಿಡಿಎ 2004ರಲ್ಲಿ ಒಮ್ಮೆ ಸರೋವರವನ್ನು ಸ್ವಚ್ಛಗೊಳಿಸಿತ್ತು. ಆದರೆ ನಂತರ ಅದರ ನಿರ್ವಹಣೆಯನ್ನು ಯಾರೂ ಮಾಡಲಿಲ್ಲ. ಹಾಗಾಗಿ ಮತ್ತೆ ಮೊದಲಿನ ಸ್ಥಿತಿಗೆ ಸರೋವರ ಮರುಕಳಿಸಿತು ಎನ್ನುತ್ತಾರೆ ಭದ್ರಯ್ಯ.
ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯವಾಗಿ ಅದರಲ್ಲಿರುವ ನೀರನ್ನೆಲ್ಲಾ ಬತ್ತಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಅಲ್ಲದೆ ಉದ್ಯಾನವನ, ಮಕ್ಕಳ ಆಟದ ಪ್ರದೇಶ, ಫೌಂಟೇನ್, ಮಳೆ ಆಶ್ರಯ ಗೋಪುರ, ಶೌಚಾಲಯ, ಮೂರ್ತಿ ವಿಸರ್ಜನೆ ಟ್ಯಾಂಕ್, ಭದ್ರತಾ ಕೋಣೆ,ಒಳಚರಂಡಿ ನೀರು ಸಂಸ್ಕರಣೆ  ಮೊದಲಾದವುಗಳನ್ನು ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಹೊನ್ನಯ್ಯ. ಇದಕ್ಕೆಲ್ಲಾ ಸೇರಿ 81 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಇನ್ನು ಎರಡು ವರ್ಷಗಳಲ್ಲಿ ಪೂರ್ಣವಾಗಲಿದೆ ಎನ್ನುತ್ತಾರೆ ಅವರು.
SCROLL FOR NEXT