ರೌಡಿಶೀಟರ್ ಕಚೇರಿಯಲ್ಲಿ ಮಹಾತ್ಮ ಗಾಂಧಿ, ಮದರ್ ತೆರಸಾ ಜೊತೆಗೆ ಬಾಂಬ್ ನಾಗನ ಫೋಟೋ
ಬೆಂಗಳೂರು: ರೌಡಿಶೀಟರ್ 'ಬಾಂಬ್ ನಾಗ' ಕುರಿತಂತೆ ಸ್ಫೋಟಕ ಮಾಹಿತಿಗಳು ದಿನಕಳೆದಂತೆ ಬಹಿರಂಗವಾಗುತ್ತಿದ್ದು, ನಾಗರಾಜ ಅಲಿಯಾಸ್ ನಾಗನ ಜೀವನ ಶೈಲಿ ಎಲ್ಲರ ಹುಬ್ಬೇರುವಂತೆ ಮಾಡುತ್ತಿದೆ.
ವೈಭವೋಪೇತ ಜೀವನ ನಡೆಸುತ್ತಿದ್ದ ರೌಡಿಶೀಟರ್ ನಾಗ ತಾನು ವಾಸವಿರುವ ಶ್ರೀರಾಂಪುರದ ಮನೆಯ ಸುತ್ತ ಸ್ವಂತ ನಾಲ್ಕೈದು ಕಟ್ಟಗಳನ್ನು ಹೊಂದಿದ್ದು, ಅಪರಿಚಿತರು ಬಾರದಂತೆ ಭದ್ರಕೋಟೆಯನ್ನು ನಿರ್ಮಿಸಿಕೊಂಡಿದ್ದ. ಸುತ್ತಮುತ್ತಲಿನ ಎಲ್ಲಾ ಕಟ್ಟಡಗಳು ನಾಲ್ಕೈದು ಅಂತಸ್ತಿನ ಕಟ್ಟಡಗಳಾಗಿದ್ದು, ಎಲ್ಲಾ ಕಟ್ಟಡಗಳಲ್ಲೂ ಸಿಸಿಟಿವಿಗಳನ್ನು ಅಳವಡಿಸಿದ್ದ. ನಾಗನ ಮನೆ ಮೇಲೆ 38 ಸಿಸಿಟಿವಿಗಳು ಕಣ್ಗಾವಲಿರಿಸಿದ್ದವು. ಅಪರಿಚಿತ ವ್ಯಕ್ತಿಗಳು ಕಂಡುಬರುತ್ತಿದ್ದಂತೆ ನಾಗ ಎಚ್ಚೆತ್ತುಕೊಳ್ಳುತ್ತಿದ್ದ.
ನಾಗ ಎರಡು ಕಟ್ಟಡದಲ್ಲಿ ವಾಸವಿದ್ದು, ಈ ಪೈಕಿ ಒಂದರಲ್ಲಿ ಕಚೇರಿ ಹಾಗೂ ಸ್ನೇಹ ಸೇವಾ ಸಮಿತಿ ಎಂಬ ಹೆಸರಿನ ಟ್ರಸ್ಟ್ ಹೊಂದಿದ್ದ. ಕಚೇರಿಯೊಳಗೆ ಹೋಗುತ್ತಿದ್ದಂತೆಯೇ ಎದುರು ಮಹಾತ್ಮ ಗಾಂಧಿ, ಮದರ್ ತೆರಸಾ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳ ಜೊತೆಗೆ ರೌಡಿಶೀಟರ್ ಬಾಂಬ್ ನಾಗನ ಫೋಟೋ ಇರುವುದು ಕಂಡುಬಂದಿತ್ತು. ಮನೆ ಹಾಗೂ ಕಚೇರಿಯ ಎಲ್ಲಾ ಬಾಗಿಲುಗಳಿಗೂ ಕಬ್ಬಿಣದ ಸರಳುಗಳನ್ನು ಅಳವಡಿಸಿದ್ದ ನಾಗ, ಯಾರೂ ಒಳಗೆ ನುಸುಳದಂತೆ ವ್ಯವಸ್ಥೆ ಮಾಡಿದ್ದ.
ತನ್ನ ಮನೆಯ ಸುತ್ತಮುತ್ತ ಹಾಗೂ ಮನೆಗೆ ಬರುವ ಒಳಮಾರ್ಗದ 10 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 38ಕ್ಕೂ ಹೆಚ್ಚು ಸಿಸಿಟವಿಗಳನ್ನು ಅಳವಡಿಸಿದ್ದ. ಮನೆಯಲ್ಲಿಯೇ ಕೂತು ಮನೆಯ ಸುತ್ತಮುತ್ತ ಓಡಾಡುವವರ ಬಗ್ಗೆ ನಿಗಾವಹಿಸಿದ್ದ. ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ಆತನ ಬಳಿ ತೆರಳಿದ್ದರು. ಇದನ್ನು ಸಿಸಿಟಿವಿಯಲ್ಲಿ ಗಮನಿಸಿರುವ ಆರೋಪಿ ಮನೆಯಿಂದ ಪರಾರಿಯಾಗಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಕೇವಲ ಮನೆ ಮಾತ್ರವಲ್ಲದೆ, ಅಕ್ಕ-ಪಕ್ಕದ ಕಟ್ಟಡಗಳ ಮೇಲೂ ಆರೋಪಿ ಸಿಸಿಟಿವಿ ಅಳವಡಿಸಿರುವುದು ಪತ್ತೆಯಾಗಿದೆ.
ನಾಗ ತನ್ನ ರೂಮ್ ಗಳಿಗೆ ಬೃಹದಾಕಾರದ ಬೀಗಗಳನ್ನು ಜಡಿದಿದ್ದ. ಹೀಗಾಗಿ ದಾಳಿ ನಡೆಸಲು ತೆರಳಿದ್ದ ಪೊಲೀಸರು ಬೀಗ ಒಡೆಯಲು ಹರಸಾಹಸ ಪಡಬೇಕಾಗಿ ಬಂದಿತ್ತು. ಬೀಗಗಳನ್ನು ತೆಗೆಯುವಷ್ಟರಲ್ಲಿ ಪೊಲೀಸರು ಸುಸ್ತಾಗಿ ಕೊನೆಗೆ ಬೀಗ ಒಡೆಯವವನನ್ನು ಸ್ಥಳಕ್ಕೆ ಕರೆಯಿಸಿ ಮಧ್ಯಾಹ್ನದ ವೇಳೆಗೆ ರೂಮ್ ವೊಂದರ ಬೀಗ ತೆಗೆಸಿದ್ದರು. 12 ಗಂಟೆಗಳ ಕಾಲ ಪೊಲೀಸರು ನಾಗನ ಮನೆಯಲ್ಲಿ ಶೋಧ ಕಾರ್ಯವನ್ನು ನಡೆಸಿದ್ದರು.
ಆರೋಪಿ ನಾಗರಾಜ್ ಹೊರಗೆ ಬರುತ್ತಿದ್ದದ್ದು ವಿರಳ ಹಾಗೂ ಜನರೊಂದಿಗೆ ಸೇರುತ್ತಿದ್ದದ್ದು ವಿರಳ. ಕೇವಲ ಆತನ ಸಹಚರರು ಮಾತ್ರ ಆತನ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದರು. ಮನೆಯಲ್ಲಿರುವ ಮೊದನೇ ಹಂತದ ಕಟ್ಟದಲ್ಲಿ ಸಭೆಯನ್ನು ನಡೆಸುತ್ತಿದ್ದ ನಾಗ, ಅಪಹರಿಸಿದ ಜನರನ್ನು ನಾಲ್ಕನೇ ಮಹಡಿಯಲ್ಲಿರಿಸುತ್ತಿದ್ದ. ಸ್ಥಳೀಯರೂ, ಅಕ್ಕಪಕ್ಕದ ಮನೆಯವರೂ ಕೂಡ ನಾಗನ ಕುಟುಂಬಸ್ಥರೊಂದಿಗೆ ಮಾತನಾಡಲು ಹೆದರುತ್ತಿದ್ದರು.
ಮನೆಯೊಳಗಿನ ಸದಸ್ಯರೇ ನಾಗ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆಂಬ ಶಂಕೆಗಳು ವ್ಯಕ್ತವಾಗಿದ್ದು, ಇದನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ತಿರಿಸ್ಕರಿಸಿದ್ದಾರೆ.
ಒಂದು ವೇಳೆ ಇದು ಸತ್ಯವಾಗಿದ್ದರೆ, ನಾಗ ತನ್ನ ಜೊತೆಗೆ ಹಣವನ್ನು ತೆಗೆದುಕೊಂಡು ಹೋಗಿರಬೇಕಿತ್ತು. ಇಲ್ಲವೇ ಹಣವನ್ನು ಬೇರೆಡೆಗೆ ರವಾನಿಸಿರಬೇಕಿತ್ತು. ಈ ಬಗೆಗಿನ ಮಾಹಿತಿಯನ್ನು ಆತ ಯಾರೊಂದಿಗೂ ಹಂಚಿಕೊಂಡಿಲ್ಲ ಎಂಬುದನ್ನು ಮಾತ್ರ ನಾವು ಖಚಿತಪಡಿಸುತ್ತೇವೆಂದು ನಿಂಬಾಳ್ಕರ್ ತಿಳಿಸಿದ್ದಾರೆ.