ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ದ್ವಿಚಕ್ರ ವಾಹನವನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು
ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು 22 ವರ್ಷದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆಯೊಂದು ಬಸವನಗುಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಜೆ.ಪಿ. ನಗರದ 9ನೇ ಹಂತದ ನಿವಾಗಿ ಡಿಆರ್'ಡಿಓ ಉದ್ಯೋಗಿ ಸುರೇಂದ್ರ ಭಟ್ ಅವರ ಪುತ್ರ ಸುಹಾಸ್ (22) ಮೃತ ವಿದ್ಯಾರ್ಥಿ. ಸುಹಾಸ್ ಜೈನ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಬಿಎಂ ವ್ಯಾಸಾಂಗ ಮಾಡುತ್ತಿದ್ದು, ಭಾನುವಾರ ಸಂಜೆ 5.45ರ ಸುಮಾರಿಗೆ ಬಸವನಗುಡಿಯಲ್ಲಿ ಸ್ನೇಹಿತರೊಬ್ಬರ ಮನೆಗೆ ತೆರಳಿ ಜೆ.ಪಿ.ನಗರದಲ್ಲಿನ ತಮ್ಮ ಮನೆಗೆ ಎನ್ ಫೀಲ್ಡ್ ಬೈಕ್ ನಲ್ಲಿ ಹೋಗುತ್ತಿದ್ದರು.
ಬಸವನಗುಡಿಯ ಸೌತ್ ತಿಂಡಿ ಹೋಟೆಲ್ ಬಳಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬಿಬಿಎಂಪಿ ಕಸದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಸುಹಾಸ್ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬಸವನಗುಡಿ ಸಂಚಾರ ಠಾಣೆ ಪೊಲೀಸರು ಲಾರಿಯನ್ನು ಜಪ್ತಿ ಮಾಡಿ, ಚಾಲಕನನ್ನು ಬಂಧಿಸಿದ್ದಾರೆ.