ರಾಜ್ಯ

ಕಸ್ತೂರಿ ರಂಗನ್ ವರದಿ: ಅಧಿಸೂಚನೆ ವಾಪಸ್ ಪಡೆಯುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರದ ಮನವಿ

Shilpa D
ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶವನ್ನು' ಪರಿಸರ ಸೂಕ್ಷ್ಮವಲಯ' ಎಂದು ಘೋಷಿಸುವ ಕುರಿತಾದ ಡಾ. ಕಸ್ತೂರಿರಂಗನ್‌ ವರದಿ ಜಾರಿಗೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ವಾಪಸ್‌ ಪಡೆಯಲು ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. 
ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರದ ವಿವಿಧ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ಕರಡು ಅಧಿಸೂಚನೆಯನ್ನು 2017 ಫೆಬ್ರುವರಿ 27ರಂದು ಕೇಂದ್ರ ಸರ್ಕಾರ ಹೊರಡಿಸಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ರಾಜ್ಯಗಳಿಗೆ ಅವಕಾಶ ಕಲ್ಪಿಸಿತ್ತು. ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ರಾಜ್ಯ ಸರ್ಕಾರ ಇದಕ್ಕೆ ಆಕ್ಷೇಪಣೆ ಸಲ್ಲಿಸುವ ಬದಲು, ಜನರ ಜೀವನೋಪಾಯಕ್ಕೆ ತೊಂದರೆ ನೀಡಲಿರುವ ಕಸ್ತೂರಿ ರಂಗನ್‌ ವರದಿಯನ್ನೇ  ತಿರಸ್ಕರಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು ಎಂದು ವಿವರಿಸಿದರು.
ಬೆಳಗಾವಿಯಿಂದ ಮಂಗಳೂರುವರೆಗೆ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಹತ್ತು ಜಿಲ್ಲೆಗಳ 33 ತಾಲೂಕುಗಳ 1276 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಕಸ್ತೂರಿ ರಂಗನ್‌ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಶೇಕಡಾ 20 ರಷ್ಟು ಅರಣ್ಯ ಪ್ರದೇಶವಿರುವ ಗ್ರಾಮಗಳನ್ನೂ ಈ ವರದಿಯ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡಲಿರುವ ಎಲ್ಲ ಗ್ರಾಮ ಪಂಚಾಯಿತಿಗಳು ವರದಿಯನ್ನು ತಿರಸ್ಕರಿಸುವಂತೆ ಸರ್ವಸಮ್ಮತ ನಿರ್ಣಯ ಕೈಗೊಂಡಿದ್ದವು. ಈ ಭಾಗದ ಶಾಸಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜನಮತದ ಆಧಾರದ ಮೇಲೆ ವರದಿ ತಿರಸ್ಕರಿಸುವಂತೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು ಎಂದು ಜಯಚಂದ್ರ ಹೇಳಿದ್ದಾರೆ.
SCROLL FOR NEXT