ಬೆಂಗಳೂರು: ಕಾರು ಚಾಲಕ ಕೆ.ಸಿ.ರಮೇಶ್ ಆತ್ಮಹತ್ಯೆ ಪ್ರಕರಣ ಸಂಬಂಧ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಹೈ ಕೋರ್ಟ್ ತಡೆ ನೀಡಿದೆ.
ಈ ಸಂಬಂಧ ಭೀಮಾನಾಯ್ಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು.
90 ದಿನ ಕಳೆದರೂ ಆರೋಪಿಯ ವಿರುದ್ಧ ದೋಷಾರೋಪ ಹೊರಿಸಲು ಪೊಲೀಸರಿಗೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಆದ್ದರಿಂದ ಪ್ರಕರಣಕ್ಕೆ ತಡೆ ನೀಡಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ನ್ಯಾಯಪೀಠ ಮಾನ್ಯ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೂ ತಡೆ ನೀಡಿ ಆದೇಶಿಸಲಾಗಿದೆ.
ಭೂ ಸ್ವಾಧೀನ ಇಲಾಖೆ ವಿಶೇಷ ಅಧಿಕಾರಿಯಾಗಿದ್ದ ಭೀಮಾನಾಯ್ಕರ ಕಾರು ಚಾಲಕನಾಗಿ ರಮೇಶ್ ಕೆಲಸ ಮಾಡುತ್ತಿದ್ದ. ಕಳೆದ ವರ್ಷ ಡಿ.12ರಂದು ಮದ್ದೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಸಾಯುವ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ, ಭೀಮಾನಾಯ್ಕ ರಾಜಕಾರಣಿಯೊಬ್ಬರ ಪುತ್ರಿಯ ಮದುವೆಗೆ ರು 100 ಕೋಟಿ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ. ಈ ವಿಷಯ ನನಗೆ ಗೊತ್ತಿರುವುದರಿಂದ ಸಹಚರರಿಂದ ನನಗೆ ಜೀವ ಬೆದರಿಕೆ ಹಾಕಿಸಿದ್ದಾರೆ ಎಂದು ಆರೋಪಿಸಿದ್ದ. ನಂತರ ಶಿವಪುರದ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ, ನಂತರ ರಮೇಶ್ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.