ಬೆಂಗಳೂರು: ನಿರ್ಜೀವ ಮತ್ತು ಬತ್ತಿ ಹೋದ ಕೆರೆಗಳನ್ನು ಡಿನೋಟಿಫಿಕೇಷನ್ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರಿಂದ ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಹೇಳಿದೆ.
ರಾಜ್ಯ ಸರ್ಕಾರ ಯಾವುದೇ ಕೆರೆಗಳನ್ನು ಡಿನೋಟಿಫೈ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ನಿರ್ಜೀವ ಮತ್ತು ಬತ್ತಿ ಹೋದ ಕೆರೆಗಳನ್ನು ಡಿನೋಟಿಫಿಕೇಷನ್ ಯಾವುದೇ ಪ್ರಸ್ತಾಪ ತಮ್ಮ ಮುಂದೆ ಇದ್ದರೆ ಅದನ್ನು ಕೈಬಿಡುವಂತೆ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು ಬರೆದಿದ್ದ ಪತ್ರಕ್ಕೆ ಟ್ವೀಟರ್ ಮೂಲಕ ಪ್ರತಿಕ್ರಿಯಿಸಿರುವ ಸಿಎಂ, ಇದು ಭಾರಿ ತಪ್ಪು ಗ್ರಹಿಕೆಯಾಗಿದೆ. ಯಾವುದೇ ಕೆರೆಯನ್ನು ನಾವು ಡಿನೋಟಿಫೈ ಮಾಡುತ್ತಿಲ್ಲ. ಕೆರೆಗಳನ್ನು ಪರಿಶೀಲಿಸಿ ಭರ್ತಿ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಕಂದಾಯ ಇಲಾಖೆ ಪ್ರಸ್ತಾಪದ ಪ್ರಕಾರ ಡಿ ನೋಟಿಫಿಕೇಷನ್ ಮಾಡಿದರೆ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಭೂ ಒತ್ತುವರಿದಾರರಿಗೆ ಅನುಕೂಲವಾಗುತ್ತದೆ. ಜತೆಗೆ ಸರ್ಕಾರ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲೂ ಶಂಕೆ ಮೂಡುತ್ತದೆ. ಇದೊಂದು ವಿವಾದ ಆಗಿರುವುದರಿಂದ ಸರ್ಕಾರ ಈ ವಿಚಾರದಲ್ಲಿ ಪಾರದರ್ಶಕತೆ ಪ್ರದರ್ಶಿಸಬೇಕಿದೆ. ಇಲ್ಲದಿದ್ದರೆ ಕಷ್ಟ ಎಂದು ಹಿರಿಯ ಸಚಿವರು ಖುದ್ದು ಮುಖ್ಯಮಂತ್ರಿಯವರ ಬಳಿಯೇ ಅಸಮಾಧಾನ
ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.