ಡಿ.ಕೆ ಶಿವಕುಮಾರ್ ನಿವಾಸದ ಹೊರಗೆ ಐಟಿ ಅಧಿಕಾರಿಗಳು ಮತ್ತು ಸಿಆರ್ ಪಿಎಫ್ ಸಿಬ್ಬಂದಿ
ಬೆಂಗಳೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ನಡೆದ ಐಟಿ ದಾಳಿ ಕಾಂಗ್ರೆಸ್ ಮುಕ್ತ ಭಾರತದ ಬಿಜೆಪಿಯ ತಂತ್ರಗಾರಿಕೆಯ ಒಂದು ಭಾಗ ಎಂದು ಬಣ್ಣಿಸಲಾಗುತ್ತಿದೆ.
ಐಟಿ ದಾಳಿ ಬಗ್ಗೆ ಮೊದಲೇ ಮಾಹಿತಿ ನೀಡದಿರುವುದು ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಹೇಳಲಾಗುತ್ತಿದೆ, ಗುಪ್ತಚಕ ಇಲಾಖೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಆಸ್ತಿ ಪಾಸ್ತಿಗಳ ಬಗ್ಗೆ ಕಳೆದ 10 ದಿನಗಳಿಂದ ಐಟಿ ಅಧಿಕಾರಿಗಳು ನಿಗಾ ವಹಿಸಿದ್ದರು. ಆದರೆ ಇದೆಲ್ಲಾ ಡಿ.ಕೆ ಶಿಕುಮಾರ್ ಅವರ ಆಪ್ತರ ಗಮನಕ್ಕೂ ಬರಲಿಲ್ಲ ಎಂದು ಹೇಳಲಾಗುತ್ತಿದೆ.
ಗೃಹ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಐಟಿ ಇಲಾಖೆ ಚಲನ ವಲನ ಹಾಗೂ ದಾಳಿಯ ಬಗ್ಗೆ ಮಾಹಿತಿ ಪಡೆಯಬಹುದಿತ್ತು. ಆದರೆ ಅಚ್ಚರಿಯ ಸಮಯದಲ್ಲಿ ದಾಳಿ ನಡೆಸಲಾಗಿತ್ತು.
ಇನ್ನೂ ದಾಳಿಯ ಬಗ್ಗೆ ಶಿವಕುಮಾರ್ ತಾಯಿ ಗೌರಮ್ಮ ನೀಡಿದ ಪ್ರತಿಕ್ರೆಯ ಆಶ್ಚರ್ಯ ಮೂಡಿಸಿದೆ. ತಮ್ಮ ಪುತ್ರನ ಮನೆಯ ಮೇಲೆ ನಡೆದ ದಾಳಿಯ ಹಿಂದೆ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಕೈವಾಡವಿದೆ ಎಂದು ಹೇಳಿದ್ದರು. ತನ್ನ ಮಗನ ಭವಿಷ್ಯವನ್ನು ಹಾಳು ಮಾಡಲು ಉದ್ದೇಶದಿಂದ ಪಿತೂರಿ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದರು.
ಗೌರಮ್ಮ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಸಿಎಂ ನಿರಾಕರಿಸಿದ್ದರು. ಆದರೆ ಶಿವಕುಮಾರ್ ಸಹೋದರ ಮತ್ತು ಕಾಂಗ್ರೆಸ್ ಸಂಸದ ಸುರೇಶ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ನನ್ನ ತಾಯಿ ಮೋದಿ ಹೆಸರು ಹೇಳಲು ಹೋಗಿ ಗೊಂದಲದಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ಹೇಳಿದ್ದಾರೆ. ಆಕೆಯ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಶಿವಕುಮಾರ್ ಗೆ ಸಂಬಂಧಿಸಿದ ವ್ಯವಹಾರ ಆಸ್ತಿ ಪಾಸ್ತಿಗಳ ಬಗ್ಗೆ ಐಟಿ ಇಲಾಖೆ ಮಾಹಿತಿ ಸಂಗ್ರಹಿಸುತ್ತಿತ್ತು. ಆದರೆ ಇದರ ಪರಿವೆಯೇ ಇಲ್ಲದೇ ಗುಪ್ತಚರ ಇಲಾಖೆ ಕಣ್ಮುಚ್ಚಿ ಕುಳಿತಿತ್ತು. ಅಂತಿಮವಾಗಿ ಬೆಂಗಳೂರಿನ ಹಲವೆಡೆ ಐಟಿ ಇಲಾಖೆ ದಾಳಿ ನಡೆಸಿತ್ತು. ಇದು ರಾಜ್ಯ ಗುಪ್ತ ಚರ ಇಲಾಖೆ ಮತ್ತು ಗೃಹ ಇಲಾಖೆಯ ವೈಫಲ್ಯ. ಸಿದ್ದರಾಮಯ್ಯ ಪೂರ್ಣ ಪ್ರಮಾಣದಲ್ಲಿ ಗೃಹ ಇಲಾಖೆ ಬಗ್ಗೆ ನಿಗಾ ವಹಿಸುತ್ತಿಲ್ಲ. ಹೀಗಾಗಿ ದುರಾದೃಷ್ಟ ನಮ್ಮ ನಾಯಕ ಡಿ,ಕೆ ಶಿವಕುಮಾರ್ ಅವರಿಗೆ ತಟ್ಟಿದೆ ಎಂದು ಕೆಪಿಸಿಸಿ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಆರು ಬಾರಿ ಶಾಸಕರಾಗಿದ್ದ ಶಿವಕುಮಾರ್ ಅವರನ್ನು ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಸಂಪುಟದಿಂದ ಸಿದ್ದರಾಮಯ್ಯ ಹೊರಗಿಟ್ಟಿದ್ದರು. ಸರ್ಕಾರ ರಚನೆಯಾಗಿ 7 ತಿಂಗಳ ನಂತರ ಶಿವಕುಮಾರ್ ಅವರನ್ನು ಬಲವಂತವಾಗಿ ಹೈಕಮಾಂಡ್ ಆದೇಶದಂತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಇನ್ನೂ ಕೆಪಿಸಿಸಿ ಅಧ್ಯಕ್ಷರಾಗಲು ಹವಣಿಸುತ್ತಿದ್ದ ಡಿಕೆಶಿಗೆ ಅವಕಾಶ ತಪ್ಪಿಸಲುವಲ್ಲಿ ಸಿಎಂ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕೆಪಿಸಿಸಿ ಕಾರ್ಯಕರ್ತರು ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ಗೆ ಸೇರಿದ ವ್ಯವಹಾರ ಮತ್ತು ರಾಜ್ಯದ ವಿವಿಧ ಸ್ಥಳಗಳಲ್ಲಿರುವ ಆಸ್ತಿಯ ಬಗ್ಗೆ ದಾಖಲಾತಿ ಪಡೆದಿರುವ ಐಟಿ ಅಧಿಕಾರಿಗಳು, ಅವುಗಳನ್ನು ಶೀಘ್ರವೇ ನವದೆಹಲಿಯ ಐಟಿ ಮುಖ್ಯ ಕಚೇರಿಗೆ ರವಾನಿಸಲಿದ್ದಾರೆ. ಕೇಂದ್ರದ ಬೇರೆ ಏಜೆನ್ಸಿಗಳು ಕೂಡ ತನಿಖೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಈಗಾಗಲೇ ನಗರಕ್ಕೆ ಆಗಮಿಸಿದೆ ಎಂದು ಮೂಲಗಳು ತಿಳಿಸಿವೆ. ಐಟಿ ಅಧಿಕಾರಿಗಳು ದಾಳಿ ಪೂರ್ಣಗೊಳಿಸಿದ ನಂತರ ಇಡಿ ತಂಡ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos