ಬೆಳಗಾವಿ: ಭಾರತೀಯ ಸಂಪ್ರದಾಯ ಬಿಂಬಿಸುವ ರಕ್ಷಾ ಬಂಧನ ಹಬ್ಬದ ಆಚರಣೆಯನ್ನು ಬೆಳಗಾವಿಯಲ್ಲಿ ಅರ್ಥಪೂರ್ಣವಾಗಿ ಮತ್ತು ವಿನೂತನವಾಗಿ ಆಚರಿಸಲಾಗಿದೆ.
ಶೌಚಾಲಯ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸಲೆಂದು ಜಿಲ್ಲಾ ಪಂಚಾಯ್ತಿ ಸಿಇಒ ರಾಮಚಂದ್ರನ್. ಆರ್ ಅವರ ಸಲಹೆಯ ಮೇರೆಗೆ ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಸೋಮವಾರ ಸಡಗರದಿಂದ ರಕ್ಷಾ ಬಂಧನವನ್ನು ಆಚರಿಸಲಾಯಿತು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ನೂತನವಾಗಿ ಶೌಚಾಲಯ ನಿರ್ಮಾಣಕ್ಕಾಗಿ ಶ್ರಮಿಸಿದ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ವಿನೂತನವಾಗಿ ಆಚರಿಸಿದರು.
ಸೋಮವಾರ ಶಿಂದಿಕುರಬೇಟ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿದ ಸಹೋದರರಿಗಾಗಿ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶೌಚಾಲಯ ನಿರ್ಮಿಸಿದ ಕಾರ್ಮಿಕರ ಕೈಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ರಾಖಿ ಕಟ್ಟಿದರು. ಪ್ರತಿಯಾಗಿ ರಾಖಿ ಕಟ್ಟಿಸಿಕೊಂಡವರು ಶೌಚಾಲಯದ ಕೀಗಳನ್ನು ಸಹೋದರಿಯರಿಗೆ ನೀಡಿದರು.
ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್ ಅವರು ರಾಖಿ ಕಟ್ಟಿದ ಸಹೋದರಿಯರಿಗೆ ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಆ ಉಡುಗೊರೆ ಶಾಶ್ವತವಾಗಿರಬೇಕು ಎಂದು ಹೇಳಿದರು. ಪ್ರಸ್ತುತ ನಾವು ಈಗ ನೀಡಿರುವ ಶೌಚಾಲಯಗಳ ಉಡುಗೊರೆ ನಮ್ಮ ಸಹೋದರಿಯರ ಗೌರವ ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು. ರಕ್ಷಾ ಬಂಧನವನ್ನು ಗ್ರಾಮೀಣಭಾಗಗಳಲ್ಲಿ ಶೌಚಾಲಯಗಳ ನಿರ್ಮಾಣದ ಮಹತ್ವದ ಅರಿವು ಮೂಡಿಸಲು ವೇದಿಕೆಯಾಗಿ ಬಳಿಸಿಕೊಳ್ಳಲಾಗಿತ್ತು. ಈ ಕಾರ್ಯದಲ್ಲಿ ನಾವು ಯಶಸ್ವಿ ಕೂಡ ಆಗಿದ್ದೇವೆ. ಇತರೆ ಗ್ರಾಮಗಳಲ್ಲೂ ಈ ಬಗ್ಗೆ ಅರಿವು ಮೂಡುತ್ತಿದೆ ಎಂದು ಅವರು ಹೇಳಿದಕು.
ಕಾರ್ಯಕ್ರಮದಲ್ಲಿ ಹಾಜರಿದ್ದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ವರಿ ಮೆಣಸಿನಕಾಯಿ ಮಾತನಾಡಿ, ಪ್ರೀತಿಯ ದ್ಯೋತಕವಾಗಿ ರಕ್ಷಣೆ ಕೋರಿ ರಾಖಿ ಕಟ್ಟುವ ಸಹೋದರರು ಉಡುಗೊರೆ ಕೊಡುವುದು ಸಾಮಾನ್ಯ. ಅದರಂತೆ ಶಾಶ್ವತವಾದ ಉಡುಗೊರೆ ನೀಡಿ ಸ್ವಾಭಿಮಾನ ಮೆರೆಯಬೇಕೆಂದು ಹೇಳಿದರು.