ರಾಜ್ಯ

ಕನ್ನಡ ಮಾತನಾಡದ ಸಿಬ್ಬಂದಿಯನ್ನು ವಜಾಗೊಳಿಸಿ: ಬ್ಯಾಂಕ್ ಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ

Lingaraj Badiger
ಬೆಂಗಳೂರು: ರಾಜ್ಯದಲ್ಲಿರುವ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯಭಾಷಿಕ ಅಧಿಕಾರಿಗಳು ಆರು ತಿಂಗಳ ಒಳಗೆ ಕನ್ನಡ ಕಲಿಯಬೇಕು. ಇಲ್ಲದಿದ್ದರೆ ಅವರನ್ನು ಕೆಲಸದಿಂದ ವಜಾಗೊಳಿಸುವಂತೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬ್ಯಾಂಕ್ ಗಳ ಮುಖ್ಯಸ್ಥರಿಗೆ ಸೂಚಿಸಿದೆ.
ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರು ರಾಷ್ಟ್ರೀಕೃತ ಬ್ಯಾಂಕ್‌, ಷೆಡ್ಯೂಲ್ಡ್‌ ಬ್ಯಾಂಕ್‌ ಹಾಗೂ ಗ್ರಾಮೀಣ ಬ್ಯಾಂಕ್‌ಗಳ ಪ್ರಾಂತೀಯ ಮುಖ್ಯಸ್ಥರಿಗೆ ಸೋಮವಾರ ಪತ್ರ ಬರೆದಿದ್ದು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಬ್ಯಾಂಕ್‌ಗಳ ಆಡಳಿತ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಎಂದು ಹೇಳಿದ್ದಾರೆ.
ಬ್ಯಾಂಕಿಂಗ್‌ ನೇಮಕಾತಿಯಲ್ಲಿ ಸ್ಥಳೀಯ ಭಾಷೆ ಬಲ್ಲ ಅಭ್ಯರ್ಥಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸೊನೆಲ್‌ ಸೆಲೆಕ್ಷನ್‌ (ಐಬಿಪಿಎಸ್‌) ಅರ್ಜಿ ನಮೂನೆಯಲ್ಲೇ  ಸ್ಪಷ್ಟಪಡಿಸಿದೆ.   ಕನ್ನಡ ಭಾಷೆ ಕಲಿಯದ ಅನ್ಯಭಾಷಿಕ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ನೇಮಕಾತಿ ನಿಯಮದಲ್ಲೂ ಅವಕಾಶ ಇದೆ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾಂಕ್ ಗಳಲ್ಲಿನ ಎಲ್ಲಾ ಸೌಲಭ್ಯಗಳು ಸರಳವಾಗಿ ಸುಲಭವಾಗಿ ದೊರೆಯುವಂತಾಗಲು ಎಲ್ಲಾ ಮಾಹಿತಿಗಳು ಕನ್ನಡದಲ್ಲಿಯೇ ಸಿಗಬೇಕು, ಬ್ಯಾಂಕುಗಳು ಮುದ್ರಿಸುವ ನಮೂನೆಗಳು ಕನ್ನಡ ಭಾಷೆಯಲ್ಲಿ ಇರಬೇಕು ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸಲು ಪ್ರತಿ ಶಾಖೆಯಲ್ಲಿಯೂ ಕನ್ನಡ ಘಟಕವನ್ನು ತೆರೆಯಬೇಕು, ಸಿಬ್ಬಂದಿ ನೇಮಕಾತಿಯಲ್ಲಿ ಡಾ. ಸರೋಜಿನಿ ಮಹಿಷಿ ವರದಿಯ ಆಶಯವನ್ನು ಪಾಲಿಸಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಹಲವಾರು ಬ್ಯಾಂಕ್‌ಗಳು ಸ್ಥಳೀಯ ಭಾಷೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ತೋರುತ್ತಿಲ್ಲ. ಬ್ಯಾಂಕಿನ ಆಡಳಿತ ವ್ಯವಹಾರದಲ್ಲಿ ತ್ರಿಭಾಷಾ ಸೂತ್ರದ ಅನ್ವಯ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡುತ್ತಿಲ್ಲ. ಇದರಿಂದ ಬಹಳಷ್ಟು ಬಡವರು ಹಾಗೂ ಗ್ರಾಮೀಣ ಜನರು ಬ್ಯಾಂಕಿಂಗ್‌ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
SCROLL FOR NEXT