ರಾಜ್ಯ

ಕಾವ್ಯಾ ಕೊಲೆಗಾರರ ಬಂಧನಕ್ಕೆ ಆಗ್ರಹಿಸಿ "ಜನಶಕ್ತಿ ಪ್ರದರ್ಶನ"!

Srinivasamurthy VN

ಮಂಗಳೂರು: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವಿಗೆ ಸಂಬಂಧಿಸಿದಂತೆ ಕಳೆದೊಂದು ವಾರದಿಂದ ನಡೆಯುತ್ತಿರುವ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ತಾರಕಕ್ಕೇರಿದ್ದು, ಬುಧವಾರ ಮಂಗಳೂರಿನಲ್ಲಿ ಬೃಹತ್  ಜನಶಕ್ತಿ ಪ್ರದರ್ಶನ ಮೆರವಣಿಗೆ ನಡೆಯಿತು.

ಜಸ್ಟಿಸ್‌ ಫಾರ್‌ ಕಾವ್ಯಾ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಆಯೋಜಿಸಲಾಗಿತ್ತು. ಈ  ಪ್ರತಿಭಟನಾ ರ್ಯಾಲಿಗೆ ವಿವಿಧ ಸಂಘಟನೆಗಳ ಕಾರ್ಯಕರ್ತರೂ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ದರು.

ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ನ್ಯಾಯ ಒದಗಿಸಬೇಕು, ಕಾವ್ಯಾ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಸ್ಟಿಸ್‌ ಫಾರ್‌ ಕಾವ್ಯಾ ಹೋರಾಟ ಸಮಿತಿ ಆಶ್ರಯದಲ್ಲಿ ಬುಧವಾರ ದಕ್ಷಿಣ  ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೃಹತ್‌ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್‌ ಆಟಗಾರ್ತಿ, ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ  ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವು ಪ್ರಕರಣದ ಬಗ್ಗೆ ಆಗಸ್ಟ್‌ ಅಂತ್ಯದೊಳಗೆ ಪಾರದರ್ಶಕ ತನಿಖೆ ನಡೆಸಿ ಪೊಲೀಸರು ಸತ್ಯಾಂಶದ ವರದಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇಲ್ಲದಿದ್ದರೆ ಸೆಪ್ಟೆಂಬರ್  10ರೊಳಗೆ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ ಗೆ ಕರೆ ನೀಡಲಾಗುವುದು ಎಂದು ಜಸ್ಟಿಸ್‌ ಫಾರ್‌ ಕಾವ್ಯಾ ಹೋರಾಟ ಸಮಿತಿಯ ದಕ್ಷಿಣ ಕನ್ನಡದ ಸಂಚಾಲಕ ದಿನಕರ ಶೆಟ್ಟಿ ಹೇಳಿದರು.

ಆಳ್ವಾಸ್‌ ಸಂಸ್ಥೆಯ ಪರವಾಗಿ ಕೆಲವು ಹೋರಾಟ ನಡೆಸಲು ಮುಂದಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಒಂದೊಮ್ಮೆ ಕಾವ್ಯಾ ನಿಮ್ಮ ಮಗಳಾಗಿದ್ದರೆ ನೀವು ಈ ಸಂಸ್ಥೆಯ ಪರವಾಗಿ ಮಾತನಾಡುತ್ತಿದ್ದಿರಾ? ಈ  ಪ್ರಕರಣದಲ್ಲಿ ನ್ಯಾಯ ಬೇಕೆಂದು ವಿದ್ಯಾರ್ಥಿಗಳು ಮಾತ್ರವಲ್ಲದೆ ಸಂಸ್ಥೆಯವರೂ ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಡಾ| ಮೋಹನ ಆಳ್ವ ಅವರೇ ಸ್ವತಃ ಮಂಪರು ಪರೀಕ್ಷೆಗೂ ಸಿದ್ಧ ಎಂದು ಹೇಳಿದ್ದಾರೆ. ಹಾಗಿರುವಾಗ ಸಂಸ್ಥೆಯ ಪರವಾಗಿ  ಹೋರಾಟ ನಡೆಸುವ ಆವಶ್ಯಕತೆ ಏನಿದೆ ಎಂದು ದಿನಕರ ಶೆಟ್ಟಿ ಪ್ರಶ್ನಿಸಿದರು. ಸಂಸ್ಥೆ ಪರ ಹೋರಾಟವನ್ನು ವಾಪಸ್‌ ಪಡೆಯದಿದ್ದರೆ ಮಂಗಳೂರು ಬಂದ್‌ಗೆ ಕರೆ ನೀಡಲು ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಇನ್ನು ಪ್ರತಿಭಟನಾ ರ್ಯಾಲಿಯಲ್ಲಿ ಕಾವ್ಯಾ ಹೆತ್ತವರಾದ ಲೋಕೇಶ್‌ ಪೂಜಾರಿ ಮತ್ತು ಬೇಬಿ, ವಿವಿಧ ಸಂಘಟನೆಗಳ ಮುಖಂಡರಾದ ಅಶೋಕ್‌ ಕೊಂಚಾಡಿ, ವಿಷ್ಣು ಮೂರ್ತಿ, ಉದಯ ಕುಮಾರ್‌, ಉದಯ ಪೂಜಾರಿ, ರಾಕೇಶ್‌  ಪೂಜಾರಿ, ಯೋಗೀಶ್‌ ಜಪ್ಪಿನಮೊಗರು, ಚರಣ್‌ ಶೆಟ್ಟಿ, ಮಾಧುರಿ, ದೀಕ್ಷಿತ್‌, ಜೀವನ್‌, ಪಿ.ಬಿ.ಡೆ'ಸಾ, ಎಂ.ಎಸ್‌. ಕೋಟ್ಯಾನ್‌, ಎಚ್‌.ಎಸ್‌. ಸಾಯಿರಾಂ, ಪದ್ಮರಾಜ್‌, ಜಯಂತಿ ಬಿ. ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

SCROLL FOR NEXT