ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಮೇಲೆ ಪ್ರತಿದಿನ ರಾಷ್ಟ್ರಧ್ವಜ ಹಾರಿಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
51 ವರ್ಷದ ಆಂಥೋಣಿ ದಾಸ್, ಇವರು ಕಳೆದ 21 ವರ್ಷದಿಂದ ಈ ಕೆಲಸ ಮಾಡುತ್ತಿದ್ದಾರೆ. ಇವರಿಗೆ ದಿನವೊಂದಕ್ಕೆ ಬಾವುಟ ಹಾರಿಸುವ ಕೆಲಸಕ್ಕೆ 50 ರು. ಹಣ ನೀಡಲಾಗುತ್ತದೆ. 2016 ರವರೆಗೂ ದಿನಕ್ಕೆ ಕೇವಲ 20 ರು ನೀಡಲಾಗುತ್ತಿತ್ತು.
ವಿಧಾನಸೌಧಕ್ಕೆ ಬರುವ ಇವರು, ಲಿಫ್ಟ್ ಮೂಲಕ ಅಥವಾ ಕೆಲವೊಮ್ಮೆ ನಡೆದುಕೊಂಡೇ ಶಕ್ತಿ ಕೇಂದ್ರದ ಮೂರನ್ ಮಹಡಿಗೆ ತೆರಳುತ್ತಾರೆ. ನಂತರ ಅಲ್ಲಿಂದ 18 ಹೆಜ್ಜೆ ನಡೆದರೇ 20 ಅಡಿ ಎತ್ತರದ ಧ್ವಜ ಕಂಬವಿದೆ. ಮಳೆಯಿರಲಿ ಗಾಳಿಯಿರಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆಂಥೋಣಿ ದಾಸ್ ತಮ್ಮ ಕೆಲಸ ನಿರ್ವಹಿಸುತ್ತಾರೆ.
8 ಮತ್ತು 12 ಅಡಿಯಿರುವ ಅತಿ ದೊಡ್ಡ ಧ್ವಜವನ್ನ ವಿಧಾನಸೌಧದ ಮೇಲೆ ಹಾರಿಸಲಾಗುತ್ತದೆ. ಇದೇ ಅಳತೆಯ ಬಾವುಟವನ್ನು ನವದೆಹಲಿ ಮತ್ತು ಆಂಧ್ರ ಪ್ರದೇಶಗಳಲ್ಲಿ ಹಾರಿಸಲಾಗುತ್ತದೆ.
ಆಂಥೋಣಿ ಸಿಎಂ ನಿವಾಸದ ಪಕ್ಕವಿರುವ ಡಿ ಗ್ರೂಪ್ ನೌಕರರಿಗೆ ನೀಡುವ ಮನೆಯಲ್ಲಿ ವಾಸವಿದ್ದಾರೆ, ಇವರಲ್ಲಿ 9 ಮಂದಿ ಸಿಬ್ಬಂದಿಗಳಿದ್ದಾರೆ. ಅವರಲ್ಲಿ ಆರು ಮಂದಿಗೆ ಧ್ವಜ ಕಂಬವನ್ನು ಹತ್ತಲು ಆಗದು. ಯಾರು ಸಮರ್ಥರಾಗಿದ್ದಾರೋ ಅವರು ಮಾತ್ರ ಗಾಳಿ ಮತ್ತು ಮಳೆಯನ್ನು ಲೆಕ್ಕಿಸದೇ ಆ ಎತ್ತರಕ್ಕೆ ಧ್ವಜ ಕಟ್ಟಿ ಹಾರಿಸುತ್ತಾರೆ.
ತಮ್ಮ ತಂದೆ ರಾಜಪ್ಪ ಸಾವಿನ ನಂತರ ಆಂಥೋಣಿ ಅವರಿಗೆ ಪರಿಹಾರವಾಗಿ ಸರ್ಕಾರ ಈ ಕೆಲಸ ನೀಡಿದೆ, ನಮ್ಮ ತಂದೆಗೆ ಈ ಕೆಲಸ ದೇವರ ಕೆಲಸವಾಗಿತ್ತು. ಯಾವಾಗಲು ತಮ್ಮ ಕೆಲಸದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅವರಿಗೆ ಮೊದಲು ಈ ಕೆಲಸಕ್ಕೆ 5 ಪೈಸೆ ನೀಡಲಾಗುತ್ತಿತ್ತು. ನಂತರ ನನಗೆ ಈ ಕೆಲಸ ದೊರಕಿದ ಮೇಲೆ ನನಗೆ ಪ್ರತಿದಿನ 2 ರು. ನೀಡಲಾಗುತ್ತಿತ್ತು.
59 ವರ್ಷದ ನಾಗರಾಜ್ ಕಳೆದ 24 ವರ್ಷಗಳಿಂದಲೂ ಈ ಕೆಲಸ ಮಾಡುತ್ತಿದ್ದಾರೆ. ಮೊದಲ ಬಾರಿ ಧ್ವಜ ಕಂಬ ಏರಿದಾಗ ತಲೆಸುತ್ತು ಕಾಣಿಸಿಕೊಂಡಿತ್ತು. ಆದರೆ ಈಗ ಆ ಕೆಲಸ ಸಹಜವಾಗಿ ಬಿಟ್ಟಿದೆ ಎಂದು ಹೇಳುತ್ತಾರೆ.
ಯಾರಾದರೂ ರಾಜಕೀಯ ನಾಯಕರು ಧ್ವಜ ಹಾರಿಸುವಾಗ ಅವರಿಗೆ ಎಲ್ಲಾ ರೀತಿಯ ಭದ್ರತೆ ಹಾಗೂ ರಕ್ಷಣೆ ನೀಡಲಾಗುತ್ತದೆ. ಅವರು ವಿಐಪಿ ಎಂಬ ಕಾರಣತ್ತೆ ಭದ್ರತೆ ಒದಗಿಸಲಾಗುತ್ತದೆ. ಆದರೆ ನಾವು ಈ ಕೆಲಸ ಮಾಡುವಾಗ ಯಾರೊಬ್ಬರು ಇರುವುದಿಲ್ಲ, ಕಳೆದ ಆರು ದಶಕಗಳಿಂದ ಡಿ ಗ್ರೂಪ್ ನೌಕರರು ಪ್ರತಿದಿನ ತ್ರಿವರ್ಣ ಧ್ವಜ ಹಾರಿಸುತ್ತಾರೆ, ಆದರೆ ಅವರ ರಕ್ಷಣೆಯ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಮಾರ್ಚ್ ವರೆಗೂ ಕಬ್ಬಿಣದಿಂದ ಮಾಡಿದ್ದ ಸ್ಟೇರ್ ಕೇಸ್ ಬಳಸಲಾಗುತ್ತಿತ್ತು. ಇದರಿಂದ ಕೆಲವೊಮ್ಮ ಜಾರಿ ಬೀಳುವ ಸಾಧ್ಯತೆಗಳಿರುತ್ತಿತ್ತು, ಆದರೆ ನಮ್ಮ ಸೂಪರ್ ವೈಸರ್ ರೇವಣ್ಣ ಸಿದ್ದಪ್ಪ ಮೆಟಲ್ ಸ್ಟೇರ್ ಕೇಸ್ ವ್ಯವಸ್ಥೆ ಮಾಡಿದ್ದಾರೆ ಎಂದು ಆಂಥೋಣಿ ಹೇಳಿದ್ದಾರೆ.
ರಾಜಭವನದಲ್ಲಿ ಇದೇ ಕೆಲಸ ಮಾಡಲು ನಾಲ್ಕರಿಂದ ಐದು ಮಂದಿ ಪೊಲೀಸ್ ಸಿಬ್ಬಂದಿ ಇರುತ್ತಾರೆ, ಆದರೆ ನಮ್ಮಲ್ಲಿ ಕೇವಲ ಒಬ್ಬರೇ ಈ ಕೆಲಸ ಮಾಡಬೇಕು. 10 ಅಡಿ ಎತ್ತರವಿರುವ ಕಂಬಕ್ಕೆ 3 ಅಡಿ ಧ್ವಜವನ್ನು ಹಾರಿಸಲಾಗುತ್ತದೆ. ರಕ್ಷಣೆ ಹಾಗೂ ಭದ್ರತೆ ವಿಷಯದಲ್ಲಿ ನಮ್ಮನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಎಂದು ಆಂಥೋಣಿ ಹೇಳಿದ್ದಾರೆ.
ಸರ್ಕಾರ ನೀಡುತ್ತಿರುವ ಸಂಭಾವನೆಯನ್ನು 50 ರಿಂದ 100 ರು ಗೆ ಏರಿಸಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಕೆಲಸಗಾರರಿಗೆ 3 ತಿಂಗಳಿಗೆ ಒಮ್ಮೆ ವೇತನ ನೀಡಲಾಗುತ್ತದೆ. ಮಳೆಗಾಲದಲ್ಲಿ ನಮಗೆ ಕೆಲಸ ಮಾಡಲು ತೊಂದರೆಯಾಗುತ್ತದೆ. ಹೀಗಾಗಿ ಜರ್ಕಿನ್ ನೀಡಬೇಕೆಂದು ಕೇಳಿದ್ದಾರೆ. ಮೊದಲು ರೇನ್ ಕೋಟ್ ನೀಡುತ್ತಿದ್ದಾರೆ. ಆದರೆ ರೇನ್ ಕೋಟ್ ಹಾಕಿಕೊಂಡು ಕಂಬ ಹತ್ತಲು ಆಗುವುದಿಲ್ಲ, ಹೀಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಬಾಷ್ ಚಂದ್ರ ಕುಂಟಿಯಾ ಕೆಲಸಗಾರರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡುವುದಾಗಿ ಹೇಳಿದ್ದಾರೆಂದು ಆಂಥೋಣಿ ತಿಳಿಸಿದ್ದಾರೆ.