ಚಿತ್ರದುರ್ಗಕೋಟೆ(ಸಂಗ್ರಹ ಚಿತ್ರ)
ಚಿತ್ರದುರ್ಗ: ದಶಕಗಳ ಕಾಲ ಕೋಟೆಗಳ ನಗರ ಚಿತ್ರದುರ್ಗವನ್ನಾಳಿದ ಪಾಳೇಗಾರ ವಂಶಸ್ಥರು ಹಲವಾರು ಆರ್ಥಿಕ ಸಮಸ್ಯೆಗಳು ಸುಳಿಯಲ್ಲಿ ಸಿಲುಕಿ ಬಸವಳಿದಿದ್ದಾರೆ.
ದೊಡ್ಡವೀರ ಮದಕರಿ ನಾಯಕ ವಂಶಸ್ಥರಾದ ರಾಜಾ ಪಿ.ಆರ್ ವೀರಭದ್ರ ನಾಯಕ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ವೆಚ್ಚಗಳನ್ನು ಭರಿಸಲು ಅಸಕ್ತರಾಗಿದ್ದಾರೆ, ಲೈಬ್ರರಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಇವರಿಗೆ ನಿವ-ತ್ತ ವೇತನ 7 ಸಾವಿರ ರು ಬರುತ್ತದೆ, ಆದರೆ ಆ ಹಣ ಮನೆಯ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ಸಾಲುತ್ತಿಲ್ಲ.
ಮಧುಮೇಹ, ರಕ್ತದೊತ್ತ, ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವ ನಾಯಕ್, ಐಸಿಯು ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರ ಪುತ್ರ ರಾಜಾ ಪರಶುರಾಮ ನಾಯಕ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.
ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಕಾರಣ ನಮ್ಮತಂದೆಯನ್ನು ಇಲ್ಲಿ ದಾಖಲಿಸಿದ್ದೇವೆ, ಕಳೆದ ವರ್ಷ ನಾನು ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದೆ, ಇದಕ್ಕಾಗಿ ಗೌರವಧನವಾಗಿ 11 ಸಾವಿರ ರೂ ನೀಡಿದ್ದರು. ಕಾಲೇಜಿನಲ್ಲಿ ನಮ್ಮನ್ನು ಖಾಯಂ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿಲ್ಲ, ಹಿಗಾಗಿ ನನಗೆ ಯಾವುದೇ ಕೆಲಸವಿಲ್ಲ, ನನ್ನ ಇಡೀ ಸಂಸಾರ ನನ್ನ ತಂದೆಯ ಪಿಂಚಣಿ ಮೇಲೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರದಿಂದ ತಮ್ಮ ತಂದೆಯ ಚಿಕಿತ್ಸೆಗೆ ಯಾವುದೇ ಸಹಾಯ ದೊರೆತಿಲ್ಲ, ನಮ್ಮ ಸಮಸ್ಯೆಯನ್ನು ಕೇಳುವವರೇ ಯಾರು ಇಲ್ಲ, ನಮ್ಮ ಕುಟುಂಬಕ್ಕೆ ಯಾವುದೇ ಆಸ್ತಿ ಹಾಗೂ ಮನೆಯಿಲ್ಲ, ಚಳ್ಳಕೆರೆಯ ಮುನಿಸಿಪಲ್ ಕ್ವಾರ್ಟಸ್ ನಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅದೂ ಕೂಡ ವಿವಾದದಲ್ಲಿದೆ. ಚಿತ್ರದುರ್ಗದ ಅಭಿವೃದ್ಧಿಗಾಗಿ ನನ್ನ ಪೂರ್ವಿಕರು ಭೂಮಿಯನ್ನು ನೀಡಿದ್ದರು. ಆದರೆ ಇಂದು ನಮ್ಮ ರಕ್ಷಣೆಗೆ ಸೂರು ನಿರ್ಮಿಸಿಕೊಳ್ಳಲು ನಮಗೆ ಸ್ವಂತ ಜಾಗವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ಮುರುಘಾ ಮಠದ ಶಿವಮೂರ್ತಿ ಶರಣರು ಆಸ್ಪತ್ರೆಗೆ ಭೇಟಿ ನೀಡಿ ವೀರಭದ್ರ ನಾಯಕ್ ಅವರ ಇಡೀ ಚಿಕಿತ್ಸೆಯ ಪೂರ್ಣ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ. ನಾಯಕರ ಪೂರ್ವಿಕರಾದ ಬಿಚ್ಚುಗತ್ತಿ ಭರಮಣ್ಣ ನಾಯಕ ಮತ್ತು ರಾಜಾ ವೀರ ಮದಕರಿ ನಾಯಕ ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಜನ ಕಲ್ಯಾಣ ಕೆಲಸಗಳನ್ನು ಮಾಡಿದ್ದಾರೆ ಎಂದು ಇತಿಹಾಸಕಾರರೊಬ್ಬರು ಹೇಳಿದ್ದಾರೆ.