ಹೊಸದಾಗಿ ನಿರ್ಮಾಣವಾಗಿರುವ ಅಂಬೇಡ್ಕರ್ ಪ್ರತಿಮೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಟೌನ್ ಹಾಲ್ ಮುಂದೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಅಮೃತ ಶಿಲೆ ಪ್ರತಿಮೆಯನ್ನು ಮಂಗಳವಾರ ಅನಾವರಣ ಗೊಳಿಸಲಿದ್ದಾರೆ.
ಮೈಸೂರು ನಗರದಲ್ಲಿ ಈಗಾಗಲೇ ಕೃಷರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಮತ್ತು ಚಾಮರಾಜ ಒಡೆಯರ್ ಅವರ ಪ್ರತಿಮೆಗಳಂತೆ ಸಮಾನತೆಯ ಸಂಕೇತವಾಗಿರುವ ಅಂಬೇಡ್ಕರ್ ಅವರ ಅಮೃತ ಶಿಲೆ ವಿಗ್ರಹವನ್ನು ಮಂಗಳವಾರ ಲೋಕಾರ್ಪಣೆ ಮಾಡಲಿದ್ದಾರೆ, 2018ರ ವಿಧಾನ ಸಭೆ ಚುನಾವಣೆ ದೃಷ್ಟಿಯಿಂದ ದಲಿತರನ್ನು ಸೆಳೆಯಲು ಸಿದ್ದರಾಮಯ್ಯ ಈ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಅಂಬೇಡ್ಕರ್ ಕುರಿತ ಅಂತಾರಾಷ್ಟ್ರೀಯ ಮಟ್ಟದ ಮೂರು ದಿನಗಳ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ ಅಂಬೇಡ್ಕರ್ ಅವರ ಮೊಟ್ಟ ಮೊದಲ ಅಮೃತ ಶಿಲೆ ವಿಗ್ರಹವನ್ನು ಅನಾವರಣಗೊಳಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ ಮತ್ತು ವಿ. ಶ್ರಿನಿವಾಸ ಪ್ರಸಾದ್ ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಲೋಕೋಪಯೋಗಿ ಇಲಾಖೆ ಮುಖ್ಯ ವಾಸ್ತುಶಿಲ್ಪಿ ಉದಯ್ ಪ್ರತಿಮೆಯ ವಿನ್ಯಾಸ ರೂಪಿಸಿದ್ದರು.
ಅಂಬೇಡ್ಕರ್ ಪ್ರತಿಮೆ ಹಾಗೂ ಗೋಪುರ ನಿರ್ಮಾಣಕ್ಕೆ ಇಲಾಖೆ ಸುಮಾರು 20 ತಿಂಗಳ ಸಮಯ ತೆಗೆದು ಕೊಂಡಿದ್ದು, ಪ್ರತಿಮೆಯನ್ನು ಸುಂದರವಾಗಿಸಲು ಯಾವುದೇ ರಾಜಿ ಮಾಡಿಕೊಂಡಿಲ್ಲ.
ತಮಿಳುನಾಡಿನ ಶಂಕರ ಶಿಪ್ಲ ಶಾಲೆಯ ಅನುಭವಿ ಕೆಲಸಗಾರರು ಅಮೃತ ಶಿಲೆ ಗೋಪುರವನ್ನು ಮತ್ತು ಚೆನ್ನೈ ನ ಪಂಕಜ್ ಆಫ್ ಸ್ಮಾರ್ಟ್ ಕ್ರಿಯೇಷನ್ ಚಿನ್ನ ಲೇಪಿತ ಗುಮ್ಮಟವನ್ನು ರಚಿಸಿದ್ದಾರೆ.
60 ಲಕ್ಷ ವೆಚ್ಚದಲ್ಲಿ ಮೈಸೂರಿನ ಅರುಣ್ ಎಂಬ ಕಲಾವಿದ 9 ಅಡಿಯ ಅಂಬೇಡ್ಕರ್ ಪ್ರತಿಮೆ ಕೆತ್ತಿದ್ದು, ಇಡೀ ಯೋಜನೆಗಾಗಿ ಒಟ್ಟು 6 ಕೋಟಿ ರು ಹಣ ಖರ್ಚು ಮಾಡಲಾಗಿದೆ. ಗೋಪರದಲ್ಲಿ ಸರ್ಕಾರ ಎಲ್ ಇಡಿ ಲೈಟ್ ಮತ್ತು ಮೂರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಅಂಬೆಡ್ಕರ್ ಅವರ ಅಮೃತ ಶಿಲೆ ವಿಗ್ರಹ ಸ್ಥಾಪನೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ಭಾರತೀಯ ಸಂವಿಧಾನ ಶಿಲ್ಪಿ ಹಾಗೂ ದೇಶವನ್ನು ಸಮಾನತೆ, ಸ್ವಾತಂತ್ರ್ಯತೆ ಹಾಗೂ ಭ್ರಾತೃತ್ವಗಳ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ನೀಡಿದ ಅಂಬೇಡ್ಕರ್ ಬಗ್ಗೆ ರಾಜ್ಯ ಸರ್ಕಾರಕ್ಕಿರುವ ಕಾಳಜಿ ತೋರುತ್ತದೆ ಎಂದು ಸಚಿವ ಮಹಾದೇವಪ್ಪ ಹೇಳಿದ್ದಾರೆ.
ನಾವು ಈ ಪ್ರತಿಮೆಯನ್ನು ಮೈಸೂರು ಅರಮನೆ ಮುಂಭಾಗ ಸ್ಥಾಪಿಸಲು ಉದ್ದೇಶಿಸಿದ್ದೆವು, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹೀಗಿರುವಾಗ ಇದನ್ನು ರಾಜಕೀಯ ಪ್ರೇರಿತ ಎಂದು ಯಾರಾಗರೂ ಹೇಗೆ ಕರೆಯುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.