ರಾಜ್ಯ

ಕಳೆದುಹೋಗಿದ್ದ ಗೋವಾ ಚಾರಣಿಗರನ್ನು ಕಣ್ಕುಂಬಿ ಅರಣ್ಯದಲ್ಲಿ ಪತ್ತೆ ಹಚ್ಚಿದ ಬೆಳಗಾವಿ ಅಧಿಕಾರಿಗಳು

Lingaraj Badiger
ಬೆಳಗಾವಿ: ಚೋರ್ಲಾ ಘಾಟ್ ನ ದಟ್ಟ ಅರಣ್ಯ ಪ್ರದೇಶದಲ್ಲಿ ಕಳೆದು ಹೋಗಿದ್ದ ಗೋವಾದ ಏಳು ಮಹಿಳಾ ಚಾರಣಿಗರನ್ನು ಬೆಳಗಾವಿ ಅರಣ್ಯ ಅಧಿಕಾರಿಗಳು ಖಾನಾಪೂರ ತಾಲೂಕಿನ ಕಣ್ಕುಂಬಿ ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಿದ್ದಾರೆ.
ದಾರಿ ತಪ್ಪಿಸಿಕೊಂಡಿದ್ದ ಚಾರಣಿಗರು ದಟ್ಟ ಅರಣ್ಯದಲ್ಲಿ ಒಂದು ರಾತ್ರಿ ಮತ್ತು ಹಗಲು ಕಳೆದಿದ್ದು, ನಾಪತ್ತೆಯಾಗಿದ್ದ ಯುವತಿಯರಿಗಾಗಿ ಗೋವಾ ಮತ್ತು ಕರ್ನಾಟಕ ಎರಡೂ ರಾಜ್ಯಗಳ ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಅಂತಿಮವಾಗಿ ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಏಳು ಚಾರಣಿಗರನ್ನು ಪತ್ತೆ ಹಚ್ಚುವಲ್ಲಿ ಬೆಳಗಾವಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅನುಮತಿ ಪಡೆಯದೇ ಅನಧಿಕೃತವಾಗಿ ಅರಣ್ಯ ಪ್ರವೇಶ ಮಾಡಿದ್ದ ಏಳು ಮಹಿಳಾ ಚಾರಣಿಗರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಿಳೆಯರು ಹಾಗೂ ಅವರ ಅನಧಿಕೃತ ಮಾರ್ಗದರ್ಶಿಯೊಂದಿಗೆ ಗೋವಾ ಗಡಿಯಿಂದ ಅರಣ್ಯ ಪ್ರವೇಶಿಸಿದ್ದ ಚಾರಣಿಗರು ಕಲವೇ ಗಂಟೆಗಳಲ್ಲಿ ದಾರಿ ತಪ್ಪಿಸಿಕೊಂಡಿದ್ದರು. ಸೋಮವಾರ ಸಂಜೆ ಅವರು ವಾಪಸ್ ಬರದ ಹಿನ್ನೆಲೆಯಲ್ಲಿ ಚಾರಣಿಗರ ಸಹೋದ್ಯೋಗಿಗಳು ಗೋವಾ ಪೊಲೀಸರಿಗೆ ಮತ್ತು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅವರು ಕೂಡಲೇ ಬೆಳಗಾವಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಎಲ್ಲಾ ಏಳು ಮಹಿಳಾ ಚಾರಣಿಗರು ಸುರಕ್ಷಿತವಾಗಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ಅವರನ್ನು ಗೋವಾ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಬಿ ಪಾಟೀಲ್ ಅವರು ತಿಳಿಸಿದ್ದಾರೆ.
SCROLL FOR NEXT