ದಿವ್ಯಾಂಗ ದಿನಾಚರಣೆಯಲ್ಲಿ ದೃಶ್ಯ ತಂಡದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ
ಬೆಂಗಳೂರು: ಸರ್ಕಾರಿ ಉದ್ಯೋಗಗಳ ಎ ಮತ್ತು ಬಿ ವರ್ಗಗಳಲ್ಲಿ ದಿವ್ಯಾಂಗರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಈ ಹಿಂದೆ ಸರ್ಕಾರಿ ಉದ್ಯೋಗಗಳ ಎ ಮತ್ತು ಬಿ ವಿಭಾಗಗಳಲ್ಲಿ ದಿವ್ಯಾಂಗರಿಗೆ ಶೇಕಡಾ 3ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಸಿ ಮತ್ತು ಡಿ ವಿಭಾಗದವರಿಗೆ ಶೇಕಡಾ 5ರಷ್ಟು ಮೀಸಲಾತಿ ಇರುತ್ತಿತ್ತು ಎಂದು ಸಚಿವೆ ಉಮಾಶ್ರೀ ನಿನ್ನೆ ವಿಶ್ವ ವಿಕಲಾಂಗ ದಿನಾಚರಣೆಯಲ್ಲಿ ಹೇಳಿದರು.
ಸರ್ಕಾರದ ಎಲ್ಲಾ ಹುದ್ದೆಗಳು ಮತ್ತು ಸೇವೆಗಳಲ್ಲಿ ದಿವ್ಯಾಂಗರಿಗೆ ಶೇಕಡಾ 3ರಷ್ಟು ಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಕಳೆದ ಜೂನ್ ನಲ್ಲಿ ಆದೇಶ ನೀಡಿತ್ತು. ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ ಶೇಕಡಾ 4ರಷ್ಟು ಮೀಸಲಾತಿ ನೀಡುವ ಕುರಿತು ನಾವು ನಿಯಮ ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದು ಉಮಾಶ್ರೀ ಹೇಳಿದರು.
ದೃಷ್ಟಿದೋಷವಿರುವ ತಾಯಂದಿರ ಜಾಗ್ರತೆ ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಅಶಕ್ತರು ಮತ್ತು ವಿಕಲಾಂಗರ ಸಶಕ್ತೀಕರಣಕ್ಕೆ ಕರ್ನಾಟಕ 9 ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಮತ್ತು ರಾಜ್ಯ ಸರ್ಕಾರ ಸುಮಾರು 4 ಲಕ್ಷ ಅಶಕ್ತರಿಗೆ ಕನಿಷ್ಠ 400 ರೂಪಾಯಿ ಭತ್ಯೆ ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಟ್ವೀಟ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2016-17ರಲ್ಲಿ ದಿವ್ಯಾಂಗ ವ್ಯಕ್ತಿಗಳ ಸಶಕ್ತೀಕರಣಕ್ಕೆ ಕರ್ನಾಟಕ ಕಳೆದ ವರ್ಷ ರಾಷ್ಟ್ರೀಯ ಪುರಸ್ಕಾರ ಸಿಕ್ಕಿದೆ ಎಂದಿದ್ದಾರೆ.