ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಸೋಮವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ನಾಗವಾರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 29.8 ಕಿ.ಮೀ. ಉದ್ದದ ಸುಮಾರು 5,950 ಕೋಟಿ ರುಪಾಯಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಗೊಟ್ಟಿಗೇರೆ-ನಾಗವಾರ ಎರಡನೇ ಹಂತದ ವಿಸ್ತರಿತ ಯೋಜನೆ ಇದಾಗಿದ್ದು, 2021ಕ್ಕೆ ಯೋಜನೆ ಪೂರ್ಣಗೊಳಿಸಲು ಡೆಡ್ ಲೈನ್ ನೀಡಲಾಗಿದೆ. ನಾಗವಾರದಿಂದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದವರೆ ಒಟ್ಟು ಏಳು ಮೆಟ್ರೊ ನಿಲ್ದಾಣಗಳ ಬರಲಿವೆ ಎಂದು ಸಚಿವರು ವಿವರಿಸಿದ್ದಾರೆ.
ವಿಮಾನ ನಿಲ್ದಾಣ ಮೆಟ್ರೊ ಮಾರ್ಗ ನಾಗವಾರದಿಂದ ಆರಂಭಗೊಂಡು, ಜಕ್ಕೂರು ಮೂಲಕ ಬಳ್ಳಾರಿ ರಸ್ತೆಗೆ ಸೇರುತ್ತದೆ. ಜಿಕೆವಿಕೆ, ಯಲಹಂಕ ವಾಯುನೆಲೆ ಮೂಲಕ ವಿಮಾನ ನಿಲ್ದಾಣ ತಲುಪುತ್ತದೆ ಎಂದು ಜಯಚಂದ್ರ ಅವರು ತಿಳಿಸಿದ್ದಾರೆ.