ರಾಜ್ಯ

2014ರ ಸಿಗರೇಟ್, ತಂಬಾಕು ಉತ್ಪನ್ನಗಳ ತಿದ್ದುಪಡಿ ಅಧಿನಿಯಮ ರದ್ದು ಪಡಿಸಿದ ಕರ್ನಾಟಕ ಹೈಕೋರ್ಟ್

Vishwanath S
ಬೆಂಗಳೂರು: ಕೇಂದ್ರ ಸರ್ಕಾರದ 2014ರ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ತಿದ್ದುಪಡಿ ಅಧಿನಿಯಮವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿ ಆದೇಶ ನೀಡಿದೆ. 
ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಪೊಟ್ಟಣದ ಶೇಖಡ 85ರಷ್ಟು ಜಾಗದಲ್ಲಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂಬ ಚಿತ್ರ ಸಹಿತ ಎಚ್ಚರಿಕೆಯ ಸಂದೇಶ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರ ಅಧಿನಿಯಮವನ್ನು ಹೊರಡಿಸಿತ್ತು. ಈ ತಿದ್ದುಪಡಿ ಅಧಿನಿಯಮ ರೂಪಿಸುವಾಗ ಕೇಂದ್ರ ಸರ್ಕಾರ ಅಗತ್ಯ ದಾಖಲೆ ಪರಿಶೀಲಿಸಿಲ್ಲ ಮತ್ತು ತನ್ನ ವಿವೇಚನೆಯನ್ನು ಸಮರ್ಪಕವಾಗಿ ಬಳಸಿಲ್ಲ. ಹೀಗಾಗಿ ಅಧಿನಿಯಮ ರೂಪಿಸುವ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ ಎಂದು ಸೂಚಿಸಿ ಈ ಅಧಿನಿಯಮವನ್ನು ರದ್ದು ಪಡಿಸಿದೆ. 
ಇನ್ನು ಕೇಂದ್ರ ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರ ಸಂವಿಧಾನದ ಪರಿಚ್ಛೇದ 77(3)ರಡಿ ಕಾನೂನಿನ ಪ್ರಕಾರ ಹೊಸದಾಗಿ ತಿದ್ದುಪಡಿ ಪ್ರಕ್ರಿಯೆ ನಡೆಸಲು ಸ್ವತಂತ್ರವಾಗಿದೆ ಎಂದು ನ್ಯಾಯಪೀಠವು ಇದೇ ವೇಳೆ ಸ್ಪಷ್ಟಪಡಿಸಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ತನ್ನ ಈ ನೀತಿಯನ್ನು ಮರು ಜಾರಿಗೊಳಿಸಲು ಅವಕಾಶ ಸಿಕ್ಕಿದೆ. 
ದೇಶದ ವಿವಿಧ ಸಿಗರೇಟ್ ಉತ್ಪಾದನಾ ಕಂಪನಿಗಳು ಕೇಂದ್ರ ಸರ್ಕಾರದ ಈ ತಿದ್ದುಪಡಿ ಅಧಿನಿಯಮವನ್ನು ಪ್ರಶ್ನಿಸಿ ತಮ್ಮ ರಾಜ್ಯಗಳಲ್ಲಿನ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದವು. ದೇಶಾದ್ಯಂತ ಇಂತಹ 50ಕ್ಕೂ ಹೆಚ್ಚು ತಕರಾರು ಅರ್ಜಿಗಳು ಆಯಾ ರಾಜ್ಯದ ಹೈಕೋರ್ಟ್ ಗಳಲ್ಲಿ ದಾಖಲಾಗಿತ್ತು. ಹೀಗಾಗಿ ಸುಪ್ರೀಂಕೋರ್ಟ್ ಈ ಎಲ್ಲಾ ತಕರಾರು ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಗೆ ರವಾನಿಸಿತ್ತು. 
SCROLL FOR NEXT