ಬೆಂಗಳೂರು: ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ, ಇನ್ನಷ್ಟು ಜನಪ್ರಿಯಗೊಳಿಸುವ ಸಲುವಾಗಿ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯತಂತ್ರ ರೂಪಿಸಿದೆ. ಇದಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ವಿಶಿಷ್ಟ ರೀತಿಯ ಕಾರ್ಯಕ್ರಮ ರೂಪಿಸಲಾಗಿದ್ದು ನ್ಯೂಯಾರ್ಕ್, ಲಂಡನ್, ಮೆಲ್ಬೋರ್ನ್ ಗಳಂತೆ ಬೆಂಗಳೂರಿಗೂ ಪ್ರತ್ಯೇಕ ಲೋಗೋ ಬಿಡುಗಡೆ ಮಾಡಲು ಸಿದ್ದತೆ ನಡೆದಿದೆ.
ಇಂದು ವಿಧಾನಸೌಧದ ಮುಂಭಾಗ ನಡೆಯಲಿರುವ ನಮ್ಮ ಬೆಂಗಳೂರು ಹಬ್ಬದಲ್ಲಿ ಈ ಲೋಗೋ ಬಿಡುಗಡೆಯಾಗಲಿದೆ. ಜಾಗತಿಕ ಪ್ರವಾಸೋದ್ಯಮ ನಕಾಶೆಯಲ್ಲಿ ಬೆಂಗಳೂರಿಗೆ ತನ್ನದೇ ಪ್ರಾಮುಖ್ಯತೆ ಇದ್ದು ಅದನ್ನು ಇನ್ನಷ್ಟು ಜನಪ್ರಿಯಗೊಳಿಸಲು ಪ್ರವಾಸೋದ್ಯಮ ಇಲಾಖೆಯು ಬ್ರ್ಯಾಂಡ್ ಬೆಂಗಳೂರು ಲೋಗೋ ತಯಾರಿಸಿದೆ.
ಇಲಾಖೆ ವತಿಯಿಂದ ಇಂದು ವಿಧಾನಸೌಧದ ಆವರಣದಲ್ಲಿ 'ನಮ್ಮ ಬೆಂಗಳೂರು ಹಬ್ಬ’ ಆಯೋಜನೆಗೊಂಡಿದ್ದು ಬೆಳಗ್ಗೆಯಿಂದ ಸಂಜೆವರೆಗೆ ವಿಧಾನಸೌಧದ ಆವರಣವು ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಈ ದಿನದ ಮಟ್ಟಿಗೆ ವಿಧಾನಸೌಧ ಮುಂಭಾಗದ ರಸ್ತೆಯು ಪಾದಚಾರಿಗಳಿಗೆ ಮಾತ್ರ ಸೀಮಿತವಾಗಲಿದ್ದು, ‘ಓಪನ್ ಸ್ಟ್ರೀಟ್’' ನ ಎರಡೂ ಬದಿಗಳಲ್ಲಿ ಸ್ಥಳೀಯ ಕಲೆಗಳ ಪ್ರದರ್ಶನ, ಫುಡ್ ಕೋರ್ಟ್, ಚಲನಚಿತ್ರ ಪ್ರದರ್ಶನ ಮೊದಲಾದ ಮನರಂಜನಾ ಕಾರ್ಯಕ್ರಮಗಳು ಇರಲಿದೆ.