ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವೀರೇಶ್ ಸೊಬರದಮಠ
ಬೆಂಗಳೂರು: ಮಹದಾಯಿ ಹಾಗೂ ಕಳಸಾ ಬಂಡೂರಿ ಯೊಜನೆ ಜಾರಿಗೆ ಒತ್ತಾಯಿಸಿ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿ ಎದುರು ರೈತರು ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಆಹೋರಾತ್ರಿ ಧರಣಿಯನ್ನು ಬುಧವಾರ ಹಿಂಪಡೆದಿದ್ದು, ಜನವರಿಯೊಳಗೆ ಮಹದಾಯಿ ವಿವಾದ ಇತ್ಯರ್ಥಪಡಿಸಬೇಕು ಎಂದು ರಾಜ್ಯ ಮೂರು ರಾಜಕೀಯ ಪಕ್ಷಗಳಿಗೆ ಡೆಡ್ ಲೈನ್ ನೀಡಿದ್ದಾರೆ.
ನಿನ್ನೆ ಧರಣಿ ನಿರತ ರೈತರ ಮನವೊಲಿಸುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ವಿಫಲವಾಗಿದ್ದರು. ಹೀಗಾಗಿ ಇಂದು ಬಿಜೆಪಿ ಕಚೇರಿಯಿಂದ ಪಾದಯಾತ್ರೆ ಮೂಲಕ ರಾಜಭವನ ಹಾಗೂ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ವನಿಗದಿತ ಕಾರ್ಯಕ್ರಮದಲ್ಲಿಭಾಗಿಯಾಗಿದ್ದರಿಂದ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ರೈತರ ಮನವಿ ಪತ್ರವನ್ನು ಸ್ವೀಕರಿಸಿದರು.
ಬಳಿಕ ಚುನಾವಣಾ ಆಯೋಗಕ್ಕೆ ತೆರಳಿ ಮಹದಾಯಿ ವಿವಾದ ಇತ್ಯಾರ್ಥವಾಗುವವರೆಗೆ ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಂದೂಡುವಂತೆ ಒತ್ತಾಯಿಸಿ ರೈತರು ಮನವಿ ಸಲ್ಲಿಸಿದರು. ಅಲ್ಲಿಂದ ಚಲನಚಿತ್ರ ವಾಣಿಜ್ಯ ಮಂಡಳಿ ತೆರಳಿ, ತಮ್ಮ ಮುಂದಿನ ಹೋರಾಟಕ್ಕೆ ಚಿತ್ರೋದ್ಯಮ ಬೆಂಬಲ ಕೋರಿದರು.
ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದಮಠ ಅವರು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳು ಜನವರಿ ಅಂತ್ಯದೊಳಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕಲ್ಪಿಸಬೇಕು, ಇಲ್ಲದಿದ್ದರೆ ಮುಂದೆ ಮತ್ತಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೆ ನಾವು ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ರೈತರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಮಹದಾಯಿ ಹೋರಾಟ ಬೆಂಬಲಿಸಿ ನಾಳೆ ಚಿತ್ರೋದ್ಯಮ ಕರಾಳ ದಿನ ಆಚರಿಸಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಟರಾದ ಶಿವರಾಜ್ ಕುಮಾರ್ ಹಾಗೂ ಜಗ್ಗೇಶ್ ಸಹ ಇದ್ದರು.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಬರೆದ ಪತ್ರದಲ್ಲಿ ದಿನಾಂಕ ನಿಗದಿಯಾಗದೇ ಇರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಮಹದಾಯಿ ಹೋರಾಟ ಸಮಿತಿ ಕಳೆದ ಐದು ದಿನಗಳಿಂದ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿತ್ತು.