ಬೆಂಗಳೂರು: 20ನೇ ಶತಮಾನದ ಪ್ರಮುಖ ಸಾಹಿತಿ ಕನ್ನಡ ಸಾಹಿತ್ಯ ಕ್ಷೇತ್ರದ ಮುಕುಟಮಣಿ ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಖ್ಯಾತ ಅಂತರ್ಜಾಲ ಶೋಧ ತಾಣ ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಕೆ ಮಾಡಿದೆ.
ಇಂದು ಅಂದರೆ ಡಿಸೆಂಬರ್ 29ರಂದು ರಸಋಷಿವ ಕುವೆಂಪು ಅವರ 113ನೇ ಜನ್ಮ ದಿನಾಚರಣೆಯಾಗಿದ್ದು, ಗೂಗಲ್ ತನ್ನ ಮುಖಪುಟದಲ್ಲಿ ಕುವೆಂಪು ಭಾವ ಚಿತ್ರವಿರುವ ಕನ್ನಡಲೇ ಗೂಗಲ್ ಎಂದು ಬರೆದಿರುವ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಕೆ ಮಾಡಿದೆ. ಬಿಳಿ ಪಂಚೆ ಮತ್ತು ಜುಬ್ಬದಲ್ಲಿ ಕುವೆಂಪು ಕಂಗೊಳಿಸುತ್ತಿದ್ದು, ಪ್ರಕೃತಿಯ ಮಡಿಲಲ್ಲಿ ಬಂಡೆ ಮೇಲೆ ಕುಳಿತಿರುವ ಕುವೆಂಪು, ಅವರ ಹಿನ್ನಲೆಯಲ್ಲಿ ಅವರ ಕುಪ್ಪಳ್ಳಿ ನಿವಾಸ ಮತ್ತು ಪ್ರಕೃತಿ ಸೌದರ್ಯ ಇರುವ ಭಾವಚಿತ್ರವನ್ನು ಗೂಗಲ್ ಮುಖಪುಟದಲ್ಲಿ ಬಳಕೆ ಮಾಡಿಕೊಂಡಿದೆ.
1904 ಡಿಸೆಂಬರ್ 29ರಂದು ಕುಪ್ಪಳ್ಳಿಯಲ್ಲಿ ಕುವೆಂಪು ಅವರು ಜನಿಸಿದ್ದರು. ಶ್ರೀರಾಮಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ನಂತಹ ಮೇರು ಕೃತಿಗಳನ್ನು ರಚಿಸಿರುವ ಕುವೆಂಪು ಅವರು, ನಾಟಕ, ವಿಮರ್ಶೆ, ಪ್ರೇಮಗೀತೆ, ಕಾದಂಬರಿ, ಕಾವ್ಯ, ವಿಮರ್ಶಾತ್ಮಕ ಪ್ರಬಂಧ, ಮಕ್ಕಳ ನಾಟಕ, ಸಾನೆಟ್ಟುಗಳು, ಮಹಾಕಾವ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ದವರಲ್ಲಿ ಪ್ರಮುಖರಾಗಿರುವ ಕುವೆಂಪು ಅವರು, ಕನ್ನಡಕ್ಕೆ ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಕೃತಿಯ ಮೂಲಕ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾಗಿರುವ ಕುವೆಂಪು ಅವರಿಗೆ ಗೂಗಲ್ ಕನ್ನಡದಲ್ಲೇ ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಕೆ ಮಾಡಿರುವುದು ವಿಶೇಷವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos