ಕಾರವಾರ ನೌಕಾನೆಲೆಯಲ್ಲಿ ನೌಕಾಪಡೆ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿದ ರಕ್ಷಣಾ ಖಾತೆ ಸಚಿವ ನಿರ್ಮಲಾ ಸೀತಾರಾಮನ್
ಕಾರವಾರ: ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಕಾರವಾರದ ಬಳಿ ಇರುವ ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿದರು. ನೌಕಾನೆಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ ನಡೆಸಿ ಅಧಿಕಾರಿಗಳೊಂದಿಗೆ ಪರಾಮರ್ಶೆ ನಡೆಸಿದರು.
ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ನಲ್ಲಿ ನೌಕಾನೆಲೆಗೆ ಆಗಮಿಸಿದ ನಿರ್ಮಲಾ ಸೀತಾರಾಮನ್, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ಜೊತೆಗೆ ಹಲವು ಚರ್ಚೆ ಮತ್ತು ಸಭೆಗಳನ್ನು ನಡೆಸಿದರು. ನಂತರ ಅವರು ಹೆಲಿಕಾಪ್ಟರ್ ನಲ್ಲಿ ಮಂಗಳೂರಿಗೆ ತೆರಳಿದರು.
ಕಾರವಾರ ನೌಕಾನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನಿರ್ಮಲಾ ಸೀತಾರಾಮನ್ ಅವರಿಗೆ ಐಎನ್ಎಸ್ ಕದಂಬ ನೌಕಾನೆಲೆ ಯೋಜನೆಯಿಂದ ಭೂಮಿ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಸಚಿವ ದೇಶಪಾಂಡೆ ತಿಳಿಸಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರಗೊಂದಿಗೆ ಮಾತನಾಡಿದ ದೇಶಪಾಂಡೆ, ನೌಕಾನೆಲೆ ಯೋಜನೆ ಸಂಬಂಧ 4,032 ಕುಟುಂಬಗಳು ತಮ್ಮ ಆಸ್ತಿ ಮತ್ತು ಮನೆಗಳನ್ನು ಕಳೆದುಕೊಂಡಿದ್ದಾರೆ. ತಮಗೆ ಹೆಚ್ಚುವರಿ ಪರಿಹಾರ ಒದಗಿಸಿಕೊಡುವಂತೆ ಸಂತ್ರಸ್ತರು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದು, ಅದಕ್ಕೆ ನ್ಯಾಯಾಲಯ ಪ್ರತಿ ಗುಂಟೆ ಜಮೀನಿಗೆ 11,500 ರೂಪಾಯಿ ನೀಡುವಂತೆ ಸರ್ಕಾರಕ್ಕೆ ಆದೇಶ ಮಾಡಿದೆ. 750 ಕೇಸುಗಳಿಗೆ ಮಾತ್ರ ರಕ್ಷಣಾ ಸಚಿವಾಲಯ ಪರಿಹಾರ ನೀಡಿದ್ದು, ಸೆಕ್ಷನ್ 18/1 ಮತ್ತು 28(ಎ)ಯಡಿ ಇನ್ನೂ 843 ಕೇಸುಗಳು ಇತ್ಯರ್ಥವಾಗದೆ ಉಳಿದುಕೊಂಡಿವೆ. ಇತ್ತೀಚೆಗೆ 25 ಪ್ರಕರಣಗಳಲ್ಲಿ 5.51 ಕೋಟಿ ರೂಪಾಯಿ ಸರ್ಕಾರ ಬಿಡುಗಡೆ ಮಾಡಿದೆ. ಈ ಎಲ್ಲಾ ವಿಷಯಗಳನ್ನು ಕೇಂದ್ರ ರಕ್ಷಣಾ ಸಚಿವೆಗೆ ವಿವರಿಸಿದ್ದು ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದರು.
ಅಗತ್ಯ ಕೌಶಲ್ಯಗಳು ಗೊತ್ತಿಲ್ಲದ ಕಾರಣ ಸ್ಥಳೀಯರಿಗೆ ನೌಕಾಪಡೆಯಲ್ಲಿ ಉದ್ಯೋಗ ದೊರಕುತ್ತಿಲ್ಲ. ಹೀಗಾಗಿ ಜಮೀನು ಕಳೆದುಕೊಂಡ ಕುಟುಂಬಗಳ ಯುವಕರಿಗೆ ಸೂಕ್ತ ಕೌಶಲ್ಯ ತರಬೇತಿ ನೀಡಬೇಕು. ಇದರಿಂದ ಅವರಿಗೆ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಸೀಬರ್ಡ್ ಯೋಜನೆಯ ಎರಡನೇ ಹಂತದಲ್ಲಿ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಸಚಿವಾಲಯ ಆದ್ಯತೆ ನೀಡಬೇಕೆಂದು ದೇಶಪಾಂಡೆ ಒತ್ತಾಯಿಸಿದರು.
ನೌಕಾನೆಲೆಯ ಒಳಗೆ ವಾಯುಪಟ್ಟಿಯನ್ನು ನಿರ್ಮಿಸಲು ಯೋಜಿಸಲಾಗಿದ್ದು ಅದನ್ನು ನಾಗರಿಕ ವಿಮಾನಯಾನಗಳಿಗೆ ಬಳಸಿಕೊಳ್ಳಬಹುದು. ಇದು ನಾಗರಿಕರಿಗೆ ಮತ್ತು ಪ್ರವಾಸಿಗರಿಗೆ ಸಹಾಯವಾಗಲಿದೆ. ಹೀಗಾಗಿ ರಕ್ಷಣಾ ಸಚಿವಾಲಯ ವಾಯುಪಟ್ಟಿಯನ್ನು ನಾಗರಿಕರ ಬಳಕೆಗೆ ನೀಡಬೇಕು ಎಂದು ಸಚಿವ ದೇಶಪಾಂಡೆ ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos