ತುಮಕೂರು: ರಾಜ್ಯದಲ್ಲಿ ನಡೆಯುತ್ತಿರುವ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಸಿದ್ಧಗಂಗಾ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಿನ್ನೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಶ್ರೀಶೈಲ ಜಗದ್ಗುರಗಳ ಬಳಿ ಸಿದ್ಧಗಂಗಾ ಶ್ರೀಗಳು ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ಧಗಂಗಾ ಶ್ರೀಗಳ ಜೊತೆ ಕೆಲ ಕಾಲ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಶೈಲ ಪೀಠದ ಜಗದ್ಗುರು ಪಂಡಿತಾರಾಧ್ಯ ಸ್ವಾಮೀಜಿ ಅವರು, ಸಿದ್ಧಗಂಗಾ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಅಸಮಧಾನ ಹೊರಹಾಕಿರುವುದಾಗಿ ತಿಳಿಸಿದ್ದಾರೆ.
ವೀರಶೈವ ಗ್ರಾಂಥಿಕ ಶಬ್ಧ,ಲಿಂಗಾಯತ ಗ್ರಾಮೀಣ ಶಬ್ಧ. ಹೀಗಾಗಿ ಎರಡೂ ಒಂದೇ ಎನ್ನುವ ಅಭಿಪ್ರಾಯವನ್ನು ಶ್ರೀಗಳು ವ್ಯಕ್ತಪಡಿಸಿದ್ದಾರೆ. ಆದರೆ ರಾಜಕೀಯ ಹಿತಾಸಕ್ತಿಗಾಗಿ ಕೆಲವರು ಜನರಲ್ಲಿ ವಿಷಬೀಜ ಮೂಡಿಸಿ ಲಿಂಗಾಯತ ಬೇರೆ, ವೀರಶೈವ ಬೇರೆ ಎಂದು ಧರ್ಮ ಇಬ್ಬಾಗ ಮಾಡಲು ಹೊರಟಿರುವ ಬಗ್ಗೆ ಶ್ರೀಗಳು ಆತಂಕ ವ್ಯಕ್ತಪಡಿಸಿದ್ದಾರೆ. ಧರ್ಮ ಇಬ್ಬಾಗ ಮಾಡುತ್ತಿರುವ ಶಕ್ತಿಗಳಿಗೆ ಸಮಾಜದ ಬಗ್ಗೆ ಕಾಳಜಿಯಿಲ್ಲ. ಹೀಗೆ ಮಾಡುವುದು ಸರಿಯಲ್ಲ ಎಂದು ಶ್ರೀಗಳು ನೋವು ತೋಡಿಕೊಂಡಿರುವುದಾಗಿ ಶ್ರೀಶೈಲ ಶ್ರೀಗಗಳು ಹೇಳಿದ್ದಾರೆ.
ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳು ಬಹಳ ನೋವಿನಲ್ಲಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದ ಇತ್ತೀಚಿನ ವಿದ್ಯಾಮಾನಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.