ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ 29 ಬೈಕ್ ಸವಾರ 29 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಮೃತಪಟ್ಟಿದ್ದಾರೆ. ಬೈಕ್ ನ ಹಿಂದೆ ವೇಗವಾಗಿ ಬರುತ್ತಿದ್ದ ಮತ್ತೊಂದು ಕಾರು ರಸ್ತೆ ಮೇಲೆ ಬಿದ್ದ ಸವಾರನ ಮೇಲೆ ಹರಿದು ಸಾಫ್ಟ್ ವೇರ್ ಎಂಜಿನಿಯರ್ ಮೃತಪಟ್ಟಿದ್ದಾರೆ.
ಮೊನ್ನೆ ಗುರುವಾರ ಸಂಜೆ ಈ ದುರ್ಘಟನೆ ನಡೆದಿದೆ. ಕಾರಿನ ಚಾಲಕನಿಗಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮೃತ ಬೈಕ್ ಸವಾರನನ್ನು ಬಿಹಾರ ಮೂಲದ ವಿಕಾಸ್ ಕುಮಾರ್ ಗೌತಮ್ ಎಂದು ಗುರುತಿಸಲಾಗಿದ್ದು ಬಿಟಿಎಂ ಲೇ ಔಟ್ ನಲ್ಲಿ ತನ್ನ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ಗೆ ಬೈಕ್ ನಲ್ಲಿ ತೆರಳುತ್ತಿದ್ದರು.
ಘಟನೆ ನಡೆದ ತಕ್ಷಣವೇ ಬಿಹಾರದಲ್ಲಿದ್ದ ಕುಟುಂಬ ಸದಸ್ಯರಿಗೆ ತಿಳಿಸಲಾಯಿತು. ಕುಟುಂಬ ಸದಸ್ಯರು ಆಗಮಿಸಿ ಮೃತದೇಹದ ಅಂತಿಮ ವಿಧಿವಿಧಾನ ನಡೆಸಲು ತಮ್ಮೂರಿಗೆ ಕೊಂಡೊಯ್ದರು.
ವಿಕಾಸ್ ಕುಮಾರ್ ಗೌತಮ್ ಮೊನ್ನೆ ಸಾಯಂಕಾಲ 7.30ರ ಸುಮಾರಿಗೆ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಕಾರಿನಲ್ಲಿ ಪೆಟ್ರೋಲ್ ಮುಗಿದಿದ್ದರಿಂದ ಮಾರುತಿ ಓಮ್ನಿ ಕಾರನ್ನು ನಿಲ್ಲಿಸಲಾಗಿತ್ತು. ಆದರೆ ಸಿಗ್ನಲ್ ಲೈಟನ್ನು ಚಾಲಕ ಹಾಕಿರಲಿಲ್ಲ. ಬೈಕ್ ನಲ್ಲಿ ಬರುತ್ತಿದ್ದ ವಿಕಾಸ್ ಗೌತಮ್ ಗೆ ಕಾರು ನಿಂತಿರುವುದು ರಾತ್ರಿ ವೇಳೆ ಗೊತ್ತಾಗಲಿಲ್ಲ. ಬೈಕ್ ಕಾರಿಗೆ ಗುದ್ದಿತು. ಕಾರಿಗೆ ಗುದ್ದಿದ ರಭಸಕ್ಕೆ ವಿಕಾಸ್ ಮಾರ್ಗ ಮಧ್ಯೆ ಕೆಳಗೆ ಬಿದ್ದರು. ಆಗ ಹಿಂದಿನಿಂದ ವೇಗವಾಗಿ ಬಂದ ಕಾರು ಅವರ ಮೇಲೆ ಹರಿಯಿತು. ತೀವ್ರ ಗಾಯಗೊಂಡ ವಿಕಾಸ್ ನನ್ನು ದಾರಿಹೋಕರು ಆಸ್ಪತ್ರೆಗೆ ತೆಗೆದುಕೊಂಡು ಹೋದರಾದರೂ ಅವರು ಬದುಕುಳಿಯಲಿಲ್ಲ.
ಓಮ್ನಿ ಕಾರು ಚಾಲಕ ವಿಲ್ಸನ್ ಗಾರ್ಡನ್ ನಿವಾಸಿಯಾಗಿದ್ದು ನಿರ್ಲಕ್ಷ್ಯತನಕ್ಕಾಗಿ ಅವರನ್ನು ಬಂಧಿಸಲಾಗಿದೆ. ವಿಕಾಸ್ ಮೇಲೆ ಹರಿದು ಹೋದ ಕಾರು ಚಾಲಕ ನಾಪತ್ತೆಯಾಗಿದ್ದು ಅವರ ಕಾರು ಸಂಖ್ಯೆಯನ್ನು ಮತ್ತೊಬ್ಬ ವಾಹನ ಚಾಲಕರು ಕಂಡುಹಿಡಿದಿದ್ದಾರೆ. ಇದೀಗ ಕಾರಿನ ಸಂಖ್ಯೆಯ ಸಹಾಯದಿಂದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.