ರಾಜ್ಯ

ಮೇಟಿ ಸಿಡಿ ಹಗರಣದಲ್ಲಿ ನನ್ನ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಲು ಸರ್ಕಾರದ ಯತ್ನ: ಅನುಪಮಾ ಶೆಣೈ

Shilpa D

ಬಳ್ಳಾರಿ: ಮಾಜಿ ಸಚಿವ ಎಚ್. ವೈ ಮೇಟಿ ಸೆಕ್ಸ್ ಸಿಡಿ ಹಗರಣದಲ್ಲಿ ರಾಜ್ಯ ಸರ್ಕಾರ ನನ್ನ ವ್ಯಕ್ತಿತ್ವ ಹಾಗೂ ಗೌರವಕ್ಕೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಆರೋಪಿಸಿದ್ದಾರೆ.

ಸೆಕ್ಸ್ ಸಿಡಿ ಟೇಪ್ ಅನ್ನು ಅಸ್ತ್ರವನ್ನಾಗಿಸಿಕೊಂಡು ನಾನು ಮತ್ತೆ ಡಿವೈಎಸ್ಪಿ ಹುದ್ದೆಗೆ ವಾಪಸ್ ಬರಲು ಪ್ರಯತ್ನಿಸುತ್ತಿದ್ದೇನೆ ಎಂದು ಜನರನ್ನು ನಂಬಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ. ಕಳೆದ ವರ್ಷದ ಜೂನ್ ನಲ್ಲಿ ವಯಕ್ತಿಕ ಕಾರಣಗಳಿಗಾಗಿ ಅನುಪಮಾ ಶೆಣೈ ತಮ್ಮ ಡಿವೈಎಸ್ ಪಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸಿಐಡಿ ಅಧಿಕಾರಿಗಳು ನಡೆಸಿದ ವಿಚಾರಣೆಗಾಗಿ ಆರ್ ಟಿ ಐ ಕಾರ್ಯಕರ್ತ ರಾಜಶೇಖರ ಮುಲಾಲಿ ಅವರ ನಿವಾಸದಲ್ಲಿ  ಹಾಜರಾಗಿದ್ದ ಶೆಣೈ,  ಮೇಟಿ ಅವರ ಸೆಕ್ಸ್ ಸಿಡಿಯನ್ನು  ಆರ್ ಎಸ್ ಎಸ್ ಮುಖಂಡ ಸಂತೋಷ್ ಜಿ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಬಿಡುಗಡೆ ಮಾಡಿದ್ದಾರೆಂದು ಕನ್ನಡ ಪತ್ರಿಕೆಯೊಂದರಲ್ಲಿ ವರದಿ ಮಾಡಲಾಗಿದೆ ಎಂದು ಹೇಳಿದ ಅವರು, ಮೇಟಿ ಅವರ ಸೆಕ್ಟ್ ಸಿಡಿ ಬಿಡುಗಡೆಗೂ ಹಾಗೂ ನನಗೂ ಯಾವುಗೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ 29 ರಂದು ನಾನು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ವಾಪಸ್ ಡಿವೈಎಸ್ ಪಿ ಹುದ್ದೆಗೆ ಮರು ನೇಮಕ ಬಯಸಿ ಪತ್ರ ಬರೆದಿದ್ದೆ. ಸೆಪ್ಟಂಬರ್ 2 2016 ರಂದು ಪೊಲೀಸ್ ಇಲಾಖೆ ಮೂಲಕ ಸಿಎಂ ಕಚೇರಿ ಪತ್ರ ತಲುಪಿತ್ತು. ಈ ವರ್ಷದ ಜನವರಿ 11 ರಂದು ಸರ್ಕಾರದಿಂದ ಮತ್ತೊಂದು ಪತ್ರ ಬಂದಿತ್ತು, ಅದರಲ್ಲಿ ಮತ್ತೆ ನಾನು ಡಿವೈಎಸ್ ಪಿ ಹುದ್ದೆಗೆ ಮರು ನೇಮಕ ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ನನ್ನಲ್ಲಿ ಯಾವುದೇ ಗೊಂದಲವಿಲ್ಲ, ಸಿಡಿ ಬಳಕೆ ಮಾಡಿ ಮತ್ತೆ ಕೆಲಸಕ್ಕೆ ಸೇರುವ ಇರಾದೆ ನನಗಿಲ್ಲ ಎಂದು ಅವರು ತಿಳಿಸಿದ್ದಾರೆ.

SCROLL FOR NEXT